

ಶಿರಸಿ: ನಗರದ ಪ್ರಮುಖ ಭಾಗವಾದ ಮುಖ್ಯ ಅಂಚೆ ಕಚೇರಿ ಪಕ್ಕದಲ್ಲಿ ನಗರಸಭೆ ನಿರ್ವಿುಸಿರುವ ಸಾರ್ವಜನಿಕ ಶೌಚಗೃಹ ನಿರ್ವಹಣೆ ಇಲ್ಲದೇ ಸ್ಥಳೀಯರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಸೂಕ್ತ ನಿರ್ವಹಣೆಯೊಂದಿಗೆ ಶೌಚಗೃಹವನ್ನು ಆಧುನೀಕರಣಗೊಳಿಸಬೇಕು ಎಂದು ಸ್ಥಳೀಯ ನಿವಾಸಿ ಕರುಣೇಶ ಅಂಗಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಈ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು, ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಆದಾಗ್ಯೂ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ಶೌಚಗೃಹಕ್ಕೆ ಯಾವುದೇ ಪೈಪ್ಲೈನ್ ಇಲ್ಲದ ಕಾರಣ ಇಲ್ಲಿಯ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಸದಾ ದುರ್ವಾಸನೆಯಿಂದ ಸುತ್ತಲಿನ ಅಂಗಡಿಕಾರರು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿಯ ಸೆಪ್ಟಿಕ್ ಟ್ಯಾಂಕ್ ಸಹ ಸರಿ ಇಲ್ಲದೇ ಅಸಹ್ಯ ಮೂಡಿಸುವ ವಾತಾವರಣವಿದೆ. ತಕ್ಷಣವೇ ಸರಿಪಡಿಸುವುದರ ಜತೆಗೆ ಈ ಶೌಚಗೃಹವನ್ನು ಆಧುನೀಕರಣಗೊಳಿಸಬೇಕು’ ಎಂದು ಒತ್ತಾಯಿಸಿದರು.