ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಕ್ರಮವಹಿಸಿ: ಬೆಂಗಳೂರು ನಗರ ಡಿಸಿ ದಯಾನಂದ ಹೇಳಿಕೆ

dc meeting
Published on

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 5 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಯಾವುದೇ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ ಶೀಘ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬರ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣ ಮೇಲ್ವಿಚಾರಣೆ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಟ್ಯಾಂಕರ್ ಮೂಲಕ ಸರಬರಾಜು ಆಗಿರುವ ಕುಡಿಯುವ ನೀರಿನ ಸಂಪೂರ್ಣ ವರದಿಯನ್ನು ತಯಾರಿಸಿ ಶೀಘ್ರವಾಗಿ ಸಲ್ಲಿಸಬೇಕು. ಘನತ್ಯಾಜ್ಯ ವಿಲೇವಾರಿ ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ವಿಲೇವಾರಿ ಘಟಕ ಸ್ಥಾಪಿಸಲು ಯೋಗ್ಯವಾದ ಸರ್ಕಾರಿ ಜಮೀನನ್ನು ಶೀಘ್ರವಾಗಿ ಗುರುತಿಸುವಂತೆ ಆಯಾ ತಹಶೀಲ್ದಾರ್‌ಗಳಿಗೆ ಕೆ.ಎ. ದಯಾನಂದ ಸೂಚಿಸಿದರು.

ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಕಾಂತರಾಜ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಪರ್ಯಾಯವಾಗಿ ನೀರು ಪೂರೈಸಲು 1,258 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಅವಶ್ಯವಿದ್ದಲ್ಲಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಸಿಗಾಳಿಯಿಂದ ರಕ್ಷಣೆ ಪಡೆಯಿರಿ:

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಗಾಳಿ ಆತಂಕವಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯುವುದು ಮುಖ್ಯ. ಜನರು ಬಿಸಿಲಿನ ಸಮಯದಲ್ಲಿ ಮನೆಗಳಿಂದ ಅತೀ ಅವಶ್ಯವಿದ್ದಾಗ ಮಾತ್ರ ಹೊರ ಬನ್ನಿ, ಅನಗತ್ಯ ಬಿಸಿಲಿನಲ್ಲಿ ಓಡಾಡುವುದು ನಿಲ್ಲಿಸಬೇಕು. ಮನೆಯಿಂದ ಹೊರಗಡೆ ಓಡಾಡುವ ವೇಳೆ ತಲೆ ಭಾಗಕ್ಕೆ ಟೋಪಿ ಇಲ್ಲವೇ ಕಾಟನ್ ಬಟ್ಟೆಯನ್ನು ಬಳಸಿಕೊಂಡು ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಕಾಂತರಾಜ್ ಮನವಿ ಮಾಡಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅನಿತಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಗುಡುಗು ಸಿಡಿಲಿನ ವೇಳೆ ಜನರು ಹಾಗೂ ಜಾನುವಾರು ಸಂರಕ್ಷಿಸಿಕೊಳ್ಳಲು ಹೊಲ-ಗದ್ದೆಗಳಲ್ಲಿ ರೈತರು ಕೆಲಸ ಮಾಡುವಾಗ ಗಿಡ-ಮರಗಳ ಆಶ್ರಯ ಪಡೆಯುವುದನ್ನು ಮಾಡಬಾರದು. ಮಳೆ ಸಂದರ್ಭ ಕಂಡುಬಂದಲ್ಲಿ ಮನೆಗಳಿಗೆ ತೆರಳಿಳಬೇಕು. ಬಿಸಿಗಾಳಿ, ಗುಡುಗು ಸಿಡಿಲು ಬಗ್ಗೆ ಮುನ್ನೆಚ್ಚರಿಕೆ ಪಾಲಿಸಲು ಸ್ಥಳೀಯವಾಗಿ ಜನರಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಕೆ.ಎ. ದಯಾನಂದ, ಬೆಂಗಳೂರು ನಗರ ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net