ಗುರುಭವನ ನಿರ್ಮಾಣಕ್ಕೆ ಶೀಘ್ರ ಕ್ರಮ

ಬೇಲೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ಸಯ್ಯದ್ ತೌಫಿಕ್ , ಶಿವಮರಿಯಪ್ಪ, ಧನಂಜಯ, ಜಗದೀಶ್, ಭಾರತೀಗೌಡ ಮತ್ತಿತರರಿದ್ದರು.
ಬೇಲೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ಸಯ್ಯದ್ ತೌಫಿಕ್ , ಶಿವಮರಿಯಪ್ಪ, ಧನಂಜಯ, ಜಗದೀಶ್, ಭಾರತೀಗೌಡ ಮತ್ತಿತರರಿದ್ದರು.
Published on

ಬೇಲೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗಾಗಿ ಪಟ್ಟಣದಲ್ಲಿ ಶೀಘ್ರದಲ್ಲೇ ನಿವೇಶನ ಗುರುತಿಸಿ ಗುರು ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಭರವಸೆ ನೀಡಿದರು.

ತಾಲೂಕು ಆಡಳಿತ, ಪುರಸಭೆ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಸರ್ವೆಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಸಂಸ್ಕಾರ ಗುರು ಪರಂಪರೆಯಿಂದ ಬಂದಿದೆ. ಗುರು ಇದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಡಾ.ಸರ್ವೆಪಲ್ಲಿ ರಾಧಕೃಷ್ಣನ್ ಅವರು ಒಬ್ಬ ಸಾಮಾನ್ಯ ಶಿಕ್ಷಕರಾಗಿ, ಉಪ ರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದವರು. ಅವರ ಜಯಂತಿಯನ್ನು ಆಚರಿಸುವುದು ಶಿಕ್ಷಕರಿಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂದರು.

ಶಿಕ್ಷಕರಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ. ಎಲ್ಲರಿಗೂ ಒಂದೇ ಭಾವನೆಯಿಂದ ವಿದ್ಯೆ ಕಲಿಸುತ್ತಾರೆ. ಅಲ್ಲದೆ ಪ್ರಾಥಾಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕರು ಒಂದೆಡೆ ಸೇರಿ ಶಿಕ್ಷಕರ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಧನದಲ್ಲಿ ಚರ್ಚಿಸುತ್ತೇನೆ ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ತನ್ನದೇ ಆದ ಸ್ಥಾನವಿದೆ. ನಮಗೆ ಅಕ್ಷರ ಕಲಿಸಿದ ಗುರುವನ್ನೂ ಯಾರೂ ಮರೆಯಬಾರದು. ಗುರುವೆಂದರೆ ಅವರು ವ್ಯಕ್ತಿಯಲ್ಲ ಶಕ್ತಿ ಎಂಬುದು ಜಗತ್ತಿಗೆ ತಿಳಿದಿದೆ. ದೇಶ ಕಟ್ಟುವುದು ಮತ್ತು ಸಮಾಜದ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಶಿಕ್ಷಕರು ತಿಳಿಸಿ ಕೊಟ್ಟಿದ್ದಾರೆ ಎಂದರು.

ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್ ಮಾತನಾಡಿ, ಬ್ರಷ್ಟಾಚಾರ ರಹಿತ ಕ್ಷೇತ್ರ ಎಂದರೆ ಅದು ಶಿಕ್ಷಣ ಕ್ಷೇತ್ರ ಮಾತ್ರ. ಇಲ್ಲಿ ಶಿಕ್ಷಕರ ಪಾತ್ರ ಇತರರಿಗೆ ಮಾದರಿಯಾಗಿದೆ. ಶಿಕ್ಷಕರು ದಾರಿ ತಪ್ಪಿದರೆ ದೇಶಕ್ಕೆ ಮಾರಕ. ಆದ್ದರಿಂದ ಶಿಕ್ಷಕರು ಸಾಮಾಜಿಕ ದೃಷ್ಠಿಯಿಂದ ನಡೆದುಕೊಳ್ಳಬೇಕು. ಶಿಕ್ಷಕರಿಗೆ ಗುರು ಭವನ ಇಲ್ಲ. ಎಲ್ಲ ಶಾಸಕರು ಭಾಷಣದಲ್ಲಿ ಹೆಳುತ್ತಾರೆ. ಆದರೆ ಕಾರ್ಯಗತವಾಗಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಿಂದ ಸಿಎ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು, ಕ್ರೀಡಾ ಸಾಧಕ ಶಿಕ್ಷಕರು ಮತ್ತು ಎಸ್‌ಎಸ್‌ಎಲ್‌ಸಿ, ಪಿಯುನಲ್ಲಿ ಹೆಂಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಬಿಇಒ ರಾಜೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ, ದೈಹಿಕ ಶಿಕ್ಷಣ ಪರಿವೀಕ್ಷಕ ಜಗದೀಶ್ , ಪತ್ರಕರ್ತರ ಸಂಘದ ಅಧ್ಯಕ್ಷೆ ಭಾರತೀಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಮಂಜುನಾಥ್, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಗಣೇಶ್.ಎಸ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್.ಜೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್, ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಪಾಲಾಕ್ಷ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net