

ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರಿನಲ್ಲಿ ಮಕ್ಕಳ ಅನುಕೂಲತೆಯ ದೃಷ್ಟಿಯಿಂದ ಸರ್ಕಾರಿ ಉರ್ದು ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ನಿಂದ ಬಿಇಒ ಕಚೇರಿವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ, ಬಿಇಒ ಎನ್.ಆರ್. ಹೆಗಡೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗುಡಂದೂರು ಸಿದ್ದಿ ಕಾಲನಿಯ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಮೂರು ಕಿಮೀ ನಡೆದು ಶಾಲೆಗೆ ಹೋಗಬೇಕಾಗುತ್ತಿದ್ದು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಮನವಿ ಸ್ವೀಕರಿಸಿದ ಬಿಇಒ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಸ್ಥಳೀಯ ಪ್ರಮುಖರಾದ ರುಸುಲ್ಸಾಬ್ ಮುಜಾವರ್, ಶರೀಫ ಸಾಬ್, ರುಸುಲ್ಸಾಬ್ ಅಬ್ದುಲ್ ಸಾಬ್ ಮುಜಾವರ್, ಮಹಮ್ಮದ್ ಸಾಬ್ ಮುಜಾವರ, ಇತರರಿದ್ದರು.