

ಚಿತ್ರದುರ್ಗ: ನಗರಸಭೆ ಸಾಮಾನ್ಯ ಸಭೆ ಕರೆಯದ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿನ ಕುಂದು-ಕೊರತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ನಗರಸಭೆ ಸದಸ್ಯರು ದೂರಿದ್ದಾರೆ.
ಈ ಸಂಬಂಧ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಕೆಲ ಸದಸ್ಯರು, ಶೀಘ್ರ ಸಾಮಾನ್ಯ ಸಭೆ ಕರೆಯುವಂತೆ ಒತ್ತಾಯಿಸಿದರು.
ಅಧ್ಯಕ್ಷ, ಉಪಾಧ್ಯಕ್ಷರ ಮೊದಲನೇ ಮೀಸಲು ಅವಧಿ ಮೇ 2ರಂದು ಮುಕ್ತಾಯವಾಗಿದ್ದು, ಅಂದಿನಿಂದ ನಗರಸಭೆಗೆ ಆಡಳಿತಾಧಿಕಾರಿ ಆಗಿರುವ ತಾವು ಕೌನ್ಸಿಲ್ ಮೀಟಿಂಗ್ ಕರೆದಿಲ್ಲ. ಪರಿಣಾಮ ಜನರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕಾನೂನಾತ್ಮಕವಾಗಿ ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ. ಜತೆಗೆ ವಾರ್ಡ್‌ಗಳಲ್ಲಿ ಜನರು ಚುನಾಯಿತರನ್ನು ದೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು
ಈಗಾಗಲೇ ಪೌರಾಡಳಿತ ಸಚಿವ ರಹಿಂಖಾನ್ ಅವರನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ 11 ಮಂದಿ ಹಾಲಿ ಹಾಗೂ ಕೆಲ ಸದಸ್ಯರು ಈಚೆಗೆ ಬೆಂಗಳೂರಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಆದ್ದರಿಂದ ನಗರಸಭೆ ಆಡಳಿತಾಧಿಕಾರಿ ಆಗಿರುವ ತಾವು ನಮ್ಮ ಹಾಗೂ ಜನರ ಸಮಸ್ಯೆ ಅರಿತು ಕೂಡಲೇ ಸಾಮಾನ್ಯ ಸಭೆ ಕರೆದು ಸಾರ್ವಜನಿಕರ ಸಂಕಷ್ಟ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಸೈಯದ್ ನಸರುಲ್ಲಾ, ಈರುಳ್ಳಿ ರಾಘವೇಂದ್ರ, ಸೈಯದ್ ಫಕ್ರುದ್ದೀನ್, ಅಬ್ಬು ಇತರರಿದ್ದರು.