

ನರಗುಂದ: ನಿರಂತರ ಮಳೆಗೆ ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ಕಾಲ್ನಡಿಗೆ ಸಂಚಾರಕ್ಕೂ ವಿಪರೀತ ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆ ಪರಿಹರಿಸಿಸುವಂತೆ ಆಗ್ರಹಿಸಿ ಪಟ್ಟಣದ ಡಾಲರ್ಸ್ ಕಾಲನಿ ಹಾಗೂ ರಾಣಿ ಚನ್ನಮ್ಮನಗರ ಬಡಾವಣೆ ನಿವಾಸಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಸಂಚಾಲಕ ನಂದೀಶ ಮಠದ ಮಾತನಾಡಿ, ಪ್ರತಿಷ್ಠಿತರ ಬಡಾವಣೆಗಳು ಎಂಬ ಖ್ಯಾತಿ ಪಡೆದಿರುವ ಕುರ್ಲಗೇರಿ ರಸ್ತೆಗೆ ಹೊಂದಿರುವ ಡಾಲರ್ಸ್ ಕಾಲನಿ, ರಾಣಿಚನ್ನಮ್ಮ ನಗರದ ಬಡಾವಣೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಈ ಬಡಾವಣೆಗಳ ನಿವಾಸಿಗಳು ಪುರಸಭೆಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಅಭಿವೃದ್ಧಿ ಕರ ಪಾವತಿಸುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂದು ದೂರಿದರು.
ಸಮರ್ಪಕ ರಸ್ತೆ, ವಿದ್ಯುತ್, ಕುಡಿಯುವ ನೀರು, ಉದ್ಯಾನ, ಒಳಚರಂಡಿ ಮೊದಲಾದ ಸೌಲಭ್ಯಗಳಿಂದ ಇಲ್ಲಿನ ಜನರು ವಂಚಿತರಾಗಿದ್ದಾರೆ. ನಿರಂತರ ಮಳೆಗೆ ಮೊಣಕಾಲುದ್ದ ಬಿದ್ದಿರುವ ಗುಂಡಿಗಳಲ್ಲಿ ಕೆಸರು ತುಂಬಿ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಬಡಾವಣೆಯ ಮಕ್ಕಳು, ಮಹಿಳೆಯರು, ವೃದ್ಧರು ಶಾಲೆ, ಕಾಲೇಜ್, ಮುಂತಾದ ಕೆಲಸ ಕಾರ್ಯಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ. ತಕ್ಷಣವೇ ತಾತ್ಕಾಲಿಕ ರಸ್ತೆ, ವಿದ್ಯುತ್, ಒಳಚರಂಡಿ ಸಮಸ್ಯೆ ಬಗೆಹರಿಸಿಕೊಡಬೇಕು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಎರಡೂ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಅವಶ್ಯಕವಾಗಿರುವ ಜೋಕಾಲಿ, ಜಾರುಬಂಡೆ, ಆಟದ ಮೈದಾನ, ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಕಲ್ಪಿಸಿಕೊಂಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದರಿಂದ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು. ಶಿವಾನಂದ ಆಚಾರ್ಯ, ಡಾ.ಎಚ್.ಆರ್. ಹಿರೇಹಾಳ, ಲಕ್ಷ್ಮೀ ಗುಡದನ್ನವರ, ಜಯಶ್ರೀ ಮಾದರ, ಜಾವೇದ ಸಂಕನೂರ, ಶಿವಾನಂದ ಹಂಚಿನಾಳಮಠ, ಎಚ್.ಆರ್. ಹಡಪದ, ಆರ್.ಎಸ್. ಲಮಾಣಿ, ಪರಸಪ್ಪ ಕುಲಕರ್ಣಿ, ವಿ.ಎಚ್. ಮಣ್ಣೂರ, ರಾಚಪ್ಪ ರಾಜನ್ನವರ, ರಮೇಶ ನಾಯ್ಕರ, ಎಸ್.ಎಸ್.ಚಂದ್ರತ್ನವರ, ಎಸ್.ಆರ್. ಮಠದ, ರುಕ್ಮಿಣಿ ಸೊಬರದ, ವಿ.ಎಚ್. ಕೊಣ್ಣೂರ ಉಪಸ್ಥಿತರಿದ್ದರು.