ಗೋಕರ್ಣದ ಸ್ವಚ್ಛತೆಗೆ ಸಹಕರಿಸಲು ಮನವಿ

15gkn1-a-
Published on

ಗೋಕರ್ಣ: ಇಲ್ಲಿನ ರಥಬೀದಿಯ ಐತಿಹಾಸಿಕ ಸುಭಾಷ್ ಚೌಕದಲ್ಲಿ 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ರಾಮ ಗೌಡ ಧ್ವಜಾರೋಹಣ ನಡೆಸಿ ಧ್ವಜವಂದನೆ ಸಲ್ಲಿಸಿದರು. ಸಭೆಯಲ್ಲಿ ಮಾತನಾಡಿದ ಅವರು ಪುಣ್ಯ ಕ್ಷೇತ್ರ ಮತ್ತು ಪ್ರವಾಸಿ ಕೇಂದ್ರ ಗೋಕರ್ಣದ ಸ್ವಚ್ಛತೆ ನಿರ್ವಹಣೆ ಕುರಿತು ಪಂಚಾಯಿತಿ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಸಹಕಾರ ನೀಡಿ ಗೋಕರ್ಣವನ್ನು ಸುಂದರ ಮತ್ತು ಆಕರ್ಷಣೀಯ ಕ್ಷೇತ್ರವಾಗಿಸಬೇಕು ಎಂದು ಮನವಿ ಮಾಡಿದರು.
ಎಎಸ್‌ಐ ನಿರಂಜನ ನಾಯಕ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪರೇಡ್ ಮೂಲಕ ಧ್ವಜಕ್ಕೆ ವಂದಿಸಿದರು. ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ನತಾಲಾ ರೆಬೆಲ್ಲೊ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಪ್ರಾಚಾರ್ಯ ಎಸ್.ಸಿ. ನಾಯಕ್, ಮುಖ್ಯೋಪಾಧ್ಯಾಯ ಸಿ.ಜಿ. ನಾಯಕ್‌ದೊರೆ, ಲಯನ್ಸ್ ಅಧ್ಯಕ್ಷ ಎನ್.ಎಸ್. ಲಮಾಣಿ, ಪಂಚಾಯಿತಿ ಸದಸ್ಯರು ಇದ್ದರು.
ರಥಬೀದಿಯ ಮೊಬೈಲ್ ಶೋರೂಮ್ ಮಾಲೀಕ ಭೀಷ್ಮ ಮಾರಿಮನೆ ಪ್ರತಿ ವರ್ಷದಂತೆ ವಿವಿಧ ಜಾತಿಯ ನೂರಾರು ಹೂ ಗಿಡಗಳನ್ನು ಉಚಿತವಾಗಿ ಜನರಿಗೆ ವಿತರಿಸಿದರು. ಲಯನ್ಸ್ ಕ್ಲಬ್ ವತಿಯಿಂದ ಎಲ್ಲರಿಗೆ ಸಿಹಿ ಹಂಚಲಾಯಿತು.
ಇತರೆಡೆಗಳಲ್ಲಿ: ಇಲ್ಲಿನ ಶ್ರೀಹರಿಹರೇಶ್ವರ ವೇದ ವಿದ್ಯಾಪೀಠದಲ್ಲಿ ಸಂಘಟಿಸಲಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ವಿದ್ವಾನ್ ಗಣಪತಿ ಮಯ್ಯರ್ ಧ್ವಜಾರೋಹಣ ಕೈಗೊಂಡರು. ಶ್ರೀಮಹಾಬಲೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ಅಧ್ಯಕ್ಷ ಮೋಹನ ನಾಯಕ ಧ್ವಜಾರೋಹಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net