ಸರ್ವಜ್ಞನ ಐಕ್ಯಸ್ಥಳ ಅಭಿವೃದ್ಧಿಗೆ ಒತ್ತಾಯ

Urge to develop a unified place of sarvgna
Published on

ರಟ್ಟಿಹಳ್ಳಿ: ಸರ್ವಜ್ಞನ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನ ಹಾಗೂ ಸರ್ವಜ್ಞನ ಐಕ್ಯ ಸ್ಥಳ ಮಾಸೂರಿಗೆ ಪ್ರಾಧಿಕಾರದ ಶೇ. 50ಕ್ಕಿಂತ ಹೆಚ್ಚಿನ ಅನುದಾನ ಒದಗಿಸಿ ಶೀಘ್ರವೇ ಐಕ್ಯಸ್ಥಳ ಅಭಿವೃದ್ಧಿಗೊಳಿಸಬೇಕು ಎಂದು ಮಾಸೂರು ಗ್ರಾಪಂ ಹಾಗೂ ಸರ್ವಜ್ಞನ ಹೋರಾಟ ಸಮಿತಿ ವತಿಯಿಂದ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ ಮಾತನಾಡಿ, ರಾಜ್ಯ ಸರ್ಕಾರ 2024-25ನೇ ಸಾಲಿನ ಅಯ್ಯವ್ಯಯದಲ್ಲಿ ಸರ್ವಜ್ಞನ ಸ್ಮಾರಕ ಅಭಿವೃದ್ಧಿಪಡಿಸುವುದಾಗಿ ಘೊಷಿಸಿದೆ. ಅಲ್ಲದೆ, ಕಳೆದ ಮಾರ್ಚ್​ನಲ್ಲಿ 8 ದಿನ ಗ್ರಾಪಂ ಕಚೇರಿಗೆ ಬೀಗ ಹಾಕಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ಹೋರಾಟದ ಫಲವಾಗಿ ವಿಶ್ವಗುರು ಬಸವಣ್ಣನವರ ಐಕ್ಯವಾದ ಕೂಡಲಸಂಗಮ ಮಾದರಿಯಲ್ಲಿ ಸರ್ವಜ್ಞರು ಐಕ್ಯವಾದ ಸ್ಥಳ ಅಭಿವೃದ್ಧಿ ಮಾಡಲು ವಿಸõತವಾದ ಅಂದಾಜು ವೆಚ್ಚ ಪಟ್ಟಿಯೊಂದಿಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮೂಲಕ ಕಳುಹಿಸಲು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಜೂನ್​ನಲ್ಲಿ ಸೂಚಿಸಿತ್ತು. 5 ತಿಂಗಳು ಕಳೆದರೂ ಇಲ್ಲಿಯವರೆಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸದೇ ಆಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಈಗಾಗಲೇ ಸರ್ಕಾರ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ 2 ಎಕರೆಗಿಂತ ಹೆಚ್ಚಿನ ಭೂಮಿ ಖರೀದಿಸಿದೆ. ಪ್ರಾಧಿಕಾರದ ಸಭೆ ಕರೆದು ಕಚೇರಿ ವಿವಾದ ಬಗೆಹರಿಸಲು ಆಯುಕ್ತರು ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ, ಇಲ್ಲಿಯವರೆಗೆ ಪ್ರಯತ್ನಿಸಿಲ್ಲ. ಪ್ರಾಧಿಕಾರದ ಕಚೇರಿಯನ್ನು ಹಿರೇಕೆರೂರ, ಮಾಸೂರು ಮತ್ತು ಅಬಲೂರ ಬಿಟ್ಟು ತಾತ್ಕಾಲಿಕವಾಗಿ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿ ಇಲ್ಲವೇ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹುದಲ್ಲವೇ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಸರ್ವಜ್ಞನ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ವಿಷಯ ಬದಿಗಿರಿಸಿ, ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ, ಸರ್ವಜ್ಞನ ಐಕ್ಯಸ್ಥಳ ಮಾಸೂರಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಶೀಘ್ರವೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ಗಿರೀಶ ಪಾಟೀಲ, ಕಾವ್ಯಾ ಹಿತ್ತಲಮನಿ, ರಶೀದಸಾಬ್ ಕುಪ್ಪೇಲೂರು, ಪೂರ್ಣಿಮಾ ಹೊನ್ನಾಳಿ, ಶಿವರಾಜ ಹೊರಟ್ಟಿ, ಪಾರ್ವತಮ್ಮ ಮುಸುಂಡಿ, ಶಾರದಾ ಕಲಾಲ, ಫಾತಿಮುಸ್ನೀಸಾ ಬಳ್ಳಾರಿ, ಗ್ರಾಮಸ್ಥರಾದ ದೇವೆಂದ್ರಪ್ಪ ಮಾಳಗಿ, ವೀರೇಶ, ಸುರೇಶ ಬಡಿಗೇರ, ಮಲ್ಲೇಶಪ್ಪ ಗುತ್ತ್ಯಣ್ಣವರ, ನಾಗನಗೌಡ ಪಾಟೀಲ, ಪ್ರಭು ನಡುವಿನಮನಿ, ಈಶ್ವರ ಹೊನ್ನಾಳಿ, ಮಂಜುನಾಥ ಕಲಾಲ, ಮಂಜುನಾಥ ಹೊನ್ನಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net