ಕೆರೆ-ಕಾಲುವೆ ಹೂಳೆತ್ತಿ ಬೆಳೆ ಹಾನಿ ತಪ್ಪಿಸಲು ಆಗ್ರಹ

HKR KERE HULU
Published on

ಹಿರೇಕೆರೂರ: ಮಳೆಗಾಲದಲ್ಲಿ ಐದು ಕೆರೆಗಳ ಕೋಡಿ ಬಿದ್ದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ಹಾಳಾಗುತ್ತಿವೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಾಲೂಕಿನ ಕಾಲ್ವೀಹಳ್ಳಿ ಗ್ರಾಮ ವ್ಯಾಪ್ತಿಯ ಕಾಲ್ವೀಹಳ್ಳಿ ಕೆರೆ, ಹೊಸಳ್ಳಿ ಕೆರೆ ಹಾಗೂ ಹೊಲಬಿಕೊಂಡದ 2 ಕೆರೆ ಸೇರಿದಂತೆ ಒಟ್ಟು 5 ಕೆರೆಗಳ ಕೋಡಿ ಹರಿದು ಕಾಲ್ವಿಹಳ್ಳಿಯ ರಾಮನಕೆರೆಗೆ ಕಾಲುವೆ ಮೂಲಕ ಹರಿಯಬೇಕಿತ್ತು. ಆದರೆ, ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ಅಲ್ಲಲ್ಲಿ ನಿರ್ವಿುಸಿದ್ದ ಸಿಡಿಗಳು ಹಾಳಾಗಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ 15 ರೈತರ ಸುಮಾರು 60 ಎಕರೆ ಪ್ರದೇಶಕ್ಕೆ ನುಗ್ಗಿ ಪ್ರತಿವರ್ಷ ಬೆಳೆಗಳು ಹಾಳಾಗುತ್ತಿವೆ.

ಹಾನಗಲ್ಲ ಸಣ್ಣ ನೀರಾವರಿ ಇಲಾಖೆಗೆ ಈ ಬಗ್ಗೆ ಮನವಿ ಸಲ್ಲಿಸಿದರೆ ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುತ್ತಾರೆ. ಈ ಕುರಿತು ಶಾಸಕರು, ತಹಸೀಲ್ದಾರ್ ಹಾಗೂ ಕೆರೆ ಅಭಿವೃದ್ಧಿ ಸಮಿತಿಗೆ ತಿಳಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಕಳೆದ ವರ್ಷ ನೀರು ನುಗ್ಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ತಹಸೀಲ್ದಾರರು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಒಂದು ನಯಾ ಪೈಸೆ ಹಣವೂ ಬಂದಿಲ್ಲ. ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕುಟುಂಬ ಸಮೇತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.

ಪ್ರತಿವರ್ಷ ಮಳೆಗಾಲದಲ್ಲಿ ತಾಲೂಕಿನ 5 ಕೆರೆಗಳ ನೀರು ಕೋಡಿ ಹರಿದು ಜಮೀನುಗಳಿಗೆ ನುಗ್ಗಿ ಬೆಳೆದ ಬೆಳೆಗಳೆಲ್ಲ ಹಾನಿಗೀಡಾಗುತ್ತಿವೆ. ಕೋಡಿ ಕಾಲುವೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಬೇಕು. ಹಾಳಾದ ಸಿಡಿಗಳನ್ನು ಅಭಿವೃದ್ಧಿಪಡಿಸಬೇಕು. | ಕೇದಾರೇಶ್ವರ ಬೈಲಹೊಂಗಲ ರೈತ, ಹಿರೇಕೆರೂರ ಕಾಲುವೆ ಅಭಿವೃದ್ಧಿಗಾಗಿ ಸದ್ಯ 2.5 ಲಕ್ಷ ರೂ. ಅನುದಾನ ಬಂದಿದೆ. ಕೂಡಲೇ ರೂಪುರೇಷೆಗಳನ್ನು ಹಾಕಿಕೊಂಡು ಹಣಕ್ಕೆ ತಕ್ಕಂತೆ ಎಷ್ಟು ಕಾಮಗಾರಿ ಮಾಡಬೇಕು ಎಂಬುದನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ರ್ಚಚಿಸಿ ಕಾಮಗಾರಿ ಮಾಡಲಾಗುವುದು. | ಕೃಷ್ಣ ಜಿಪಂ ಇಲಾಖೆಯ ಸಹಾಯಕ ಇಂಜಿನಿಯರ್ ಹಿರೇಕೆರೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net