ವಕ್ಫ್ ಮಂಡಳಿಗೆ ಸೂಕ್ತ ನಿರ್ದೇಶನ ನೀಡಲು ಒತ್ತಾಯ

06 HANUR 4
Published on

ಹನೂರು : ವಕ್ಫ್ ಮಂಡಳಿಯ ಗೊಂದಲದಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಬುಧವಾರ ತಾಲೂಕು ರೈತ ಸಂಘಟನೆಯ ಪದಾಧಿಕಾರಿಗಳು ಉಪ ತಹಸೀಲ್ದಾರ್ ನಾಗೇಂದ್ರ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ವಕ್ಫ್ ಮಂಡಳಿಯು ಸ್ವತಂತ್ರ ಪೂರ್ವದಲ್ಲಿಯೇ ರಚಿಸಲಾಗಿದೆ. ಆದರೆ ಈ ಮಂಡಳಿಗೆ ಸ್ವಾತಂತ್ರ್ಯದ ಬಳಿಕ ಹಲವು ಬಾರಿ ತಿದ್ದುಪಡಿಯನ್ನು ತರಲಾಗಿದೆ ಎಂದು ಜನ ಸಾಮಾನ್ಯರಲ್ಲಿ ಮನೆ ಮಾಡಿದ್ದು, ಆತಂಕ ಸೃಷ್ಟಿಸಿದೆ. ಇದೀಗ ರಾಜ್ಯದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿರುವ ಹಾಗೂ ಸರ್ಕಾರದಿಂದ ಭೂಮಿಯನ್ನು ಪಡೆದಿರುವ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಭೂಮಿಯನ್ನು ಕಳೆದುಕೊಳ್ಳುವ ಆತಂಕ ರೈತರಲ್ಲಿ ಎದುರಾಗಿದೆ ಎಂದರು.

ಆದ್ದರಿಂದ ಅನಾದಿ ಕಾಲದಿಂದಲೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡಬೇಕು. ಜತೆಗೆ ಪಹಣಿಯಲ್ಲಿರುವ 11ನೇ ಕಾಲಂನಲ್ಲಿ ನೊಂದಾಯಿಸಿರುವ ವಕ್ಫ್ ಹೆಸರನ್ನು ತೆಗೆಯಬೇಕು ಹಾಗೂ ರೈತರಿಗೆ ನೋಟಿಸ್ ನೀಡದಂತೆ ಸರ್ಕಾರ ವಕ್ಫ್ ಮಂಡಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಗೌರವಾಧ್ಯಕ್ಷ ರಾಜೇಂದ್ರ, ಪದಾಧಿಕಾರಿಗಳಾದ ಅರ್ಪುರಾಜ್, ವೆಂಕಟಾಚಲ, ಸಂತಿಯಾಗು, ನಾಗರಾಜು, ಬಸವರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net