ಜಿಲ್ಲೆಯವರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಒತ್ತಾಯ

13-10-Shiva-2
ರಾಯಚೂರಿನ ಸೇವಾ ಪಿಯು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಅಭಿಯಾನವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ಉದ್ಘಾಟಿಸಿದರು. ಬಿಜೆಪಿ ಮುಖಂಡರಾದ ತ್ರಿವಿಕ್ರಮ ಜೋಷಿ, ಶಿವಬಸಪ್ಪ ಮಾಲಿಪಾಟೀಲ್, ಕೆ.ಎಂ.ಪಾಟೀಲ್, ಬಿ.ಗೋವಿಂದ, ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಇದ್ದರು.
Published on

ರಾಯಚೂರು: ಈಶಾನ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಜಿಲ್ಲೆಯವರಿಗೆ ಟಿಕೆಟ್ ನೀಡುವುದಿಲ್ಲ. ಜಿಲ್ಲೆಯಲ್ಲಿ ಮತದಾರರ ನೋಂದಣಿ ಸಂಖ್ಯೆ ಕಡಿಮೆಯಾಗುತ್ತಿರುವುದು ಅದಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಅಭಿಪ್ರಾಯಪಟ್ಟರು.
ಸ್ಥಳೀಯ ಸೇವಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈ ಬಾರಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ನೋಂದಣಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿದರೆ ಜಿಲ್ಲೆಯವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಾಯ ಮಾಡಲಾಗುವುದು ಎಂದರು.
ಪಕ್ಷ ಬೆಳೆದು ನಿಂತಾಗ ಬಂದು ಸೇರುವವರು ಬಹಳ ಜನ ಇರುತ್ತಾರೆ. ಆದರೆ ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಹೆಚ್ಚಿನ ಬೆಳೆ ಇರುತ್ತದೆ. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಶರಣಬಸವ ಪಾಟೀಲ್ ಎರಡು ದಶಕಕ್ಕೂ ಹೆಚ್ಚು ಕಾಲ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದು, ಪಕ್ಷ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರು.
ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿ, ಕಳೆದ ಚುನಾವಣೆ ಹೊರತುಪಡಿಸಿದರೆ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಸಿದೆ. ಕ್ಷೇತ್ರದ ವ್ಯಾಪ್ತಿಗೆ 5 ಲೋಕಸಭೆ ಹಾಗೂ 40 ವಿಧಾನಸಭೆ ಕ್ಷೇತ್ರಗಳು ಬರುತ್ತಿದ್ದು, ಹೆಚ್ಚಿನ ಶ್ರಮ ವಹಿಸಬೇಕಾಗಿದೆ.
ಪ್ರತಿ ಚುನಾವಣೆಯಲ್ಲಿ ಮತದಾರರು ನೋಂದಣಿ ಮಾಡಿಸಬೇಕಾಗಿದ್ದು, ಇದು ಅಭ್ಯರ್ಥಿಗಳಿಗೆ ಅನುಕೂಲವಾಗಿರುವುದರ ಜತೆಗೆ ಹೆಚ್ಚಿನ ಕೆಲಸವನ್ನು ಮಾಡಬೇಕಾಗುವಂತಾಗಿದೆ. ಕನಿಷ್ಠ ಜಿಲ್ಲೆಯಲ್ಲಿ 50 ಸಾವಿರ ಮತದಾರರ ನೋಂದಣಿ ಮಾಡಿದರೆ ಗೆಲು ನಮ್ಮದಾಗುತ್ತದೆ ಎಂದು ಹೇಳಿದರು.
ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್ ಮಾತನಾಡಿ, ಹಿಂದೆ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮತದಾರರ ನೋಂದಣಿ ಮಾಡಿಸುತ್ತಿದ್ದರು. ಆದರೆ ಆ ಪರಿಸ್ಥಿತಿಯಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದರೆ ಶರಣಬಸವ ಪಾಟೀಲ್‌ಗೆ ಟಿಕೆಟ್ ಕೊಡಿಸುವ ಜವಾಬ್ದಾರಿ ನಮ್ಮದು ಎಂದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿ, ಕಳೆದ 23 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದು, ಅತಿಥಿ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮಾಡುತ್ತಾ ಬಂದಿದ್ದು, 371ಜೆ ಜಾರಿಯಾಗಿದ್ದರೂ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಅದರಲ್ಲಿನ ಲೋಪದೋಷ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಪಾಟೀಲ್, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದ ಹಾಗೂ ವಿವಿಧ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net