

ಲಕ್ಷೆ್ಮೕಶ್ವರ: ಇಳಕಲ್-ಕೈಗಾ ರಾಜ್ಯ ಹೆದ್ದಾರಿಯ ಗೋವನಾಳ ಗ್ರಾಮದ ಸಮೀಪವಿರುವ ಸೇತುವೆ ಶಿಥಿಲಗೊಂಡಿದ್ದು, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಿಂದ ಗದಗ, ಲಕ್ಷೆ್ಮೕಶ್ವರ ಮಾರ್ಗವಾಗಿ ಬೆಂಗಳೂರು ತಲುಪುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಈ ರಸ್ತೆ ಮೇಲೆ ಮರಳು, ಮಣ್ಣು, ಎಂ. ಸ್ಯಾಂಡ್, ಖಡಿ ಸೇರಿ ಅತೀ ಭಾರವಾದ ಲಾರಿ, ಟಿಪ್ಪರ್ ವಾಹನಗಳೂ ಹಾದು ಹೋಗುವುದರಿಂದ ಶಿಥಿಲಗೊಂಡಿರುವ ಸೇತುವೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. 1960 ಇಸ್ವಿಯಲ್ಲಿ ಈ ಸೇತುವೆ ನಿರ್ವಿುಸಲಾಗಿದ್ದು, ಈ ವರೆಗೂ ಯಾವುದೇ ದುರಸ್ತಿ ಕಂಡಿಲ್ಲ. ಸೇತುವೆಗೆ ಉಪಯೋಗಿಸಿರುವ ಕಬ್ಬಿಣ ತುಕ್ಕು ಹಿಡಿದಿದ್ದು, ಅಲ್ಲಲ್ಲಿ ಕಿತ್ತು ಹೋಗಿದೆ. ಸುತ್ತಲೂ ಗಿಡ-ಕಂಟಿಗಳು ಬೆಳೆದು ಸೇತುವೆ ಕಾಣದಂತಾಗಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗೋವನಾಳ ಗ್ರಾಮದ ಮಂಜನಗೌಡ ಕೆಂಚನಗೌಡ, ಚಂದ್ರು ತಳವಾರ, ನಾಗರಾಜ ದೊಡ್ಡಮನಿ, ಭರಮಣ್ಣ ರೊಟ್ಟಿಗವಾಡ, ಶೇಖರಗೌಡ ಕರಿಗೌಡ್ರ ಮತ್ತಿತರರು, ಈ ಕುರಿತು ಪ್ರತಿಕ್ರಿಯಿಸಿ 65 ವರ್ಷಗಳ ಹಿಂದೆಯೇ ನಿರ್ವಿುಸಲಾಗಿದೆ ಎಂದು ನಮ್ಮೂರ ಹಿರಿಯರು ಹೇಳುತ್ತಾರೆ. ಆದರೆ, ಇದುವರೆಗೂ ಈ ಸೇತುವೆಯ ಬಗ್ಗೆ ಯಾರೊಬ್ಬರೂ ಕಣ್ಣೆತ್ತಿಯೂ ನೋಡಿಲ್ಲ. ಮೇಲ್ನೋಟಕ್ಕೆ ಸೇತುವೆ ಉತ್ತಮವಾಗಿಯೇ ಕಾಣುತ್ತಿದ್ದೂ, ಸೇತುವೆಯ ಕೆಳಭಾಗ ಸಂಪೂರ್ಣ ಶಿಥಿಲಗೊಂಡು ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಹೊರ ಬಿದ್ದಿವೆ. ಆದ್ದರಿಂದ ಸಂಬಂಧಪಟ್ಟ ಪಿಡಬ್ಲ್ಯುಡಿ ಇಲಾಖೆಯವರು ಸೇತುವೆಯನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸೇತುವೆ ಪರಿಶೀಲಿಸಿ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. | ಫಕೀರೇಶ ತಿಮ್ಮಾಪುರ ಎಇಇ, ಲೋಕೋಪಯೋಗಿ ಇಲಾಖೆ