

ಕಾರವಾರ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಬಣದ ಪದಾಽಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಿತ್ರ ಸಮಾಜದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ, ಅಪರ ಜಿಲ್ಲಾಽಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಽಕಾರವಿದೆ. ಮತ್ತು ಆದೇಶವನ್ನು ಅನುಷ್ಠಾನ ಮಾಡಲು ರಾಜ್ಯ ಸರ್ಕಾರಗಳಿಗೆ ಅಽಕಾರವಿದೆ ಎಂದು ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಒಳ ಮೀಸಲಾತಿ ಕಲ್ಪಿಸಬೇಕು ಎಂದು 30 ವರ್ಷಗಳಿಂದ ಬಿ.ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಈ ಹಿಂದೆ ಹರಿಯಾಣ, ತಮಿಳುನಾಡು ಸೇರಿ ಕೆಲವು ರಾಜ್ಯಗಳು ಒಳ ಮೀಸಲಾತಿ ನೀಡಿದ್ದವು. ಆದರೆ, ನ್ಯಾಯಾಲಯ ತಡೆ ನೀಡಿತ್ತು. ಒಳ ಮೀಸಲಾತಿ ಕಲ್ಪಿಸುವುದು ಬಹಳ ಸವಾಲಿನ ಕೆಲಸ ಹಾಗಾಗಿ ಯಾರದೋ ಇಷ್ಟ, ನಷ್ಟಗಳನ್ನು ಅವಲಂಬಿಸದೇ, ಪ್ರಮಾಣೀಕರಿಸಬಹುದಾದ ದತ್ತಾಂಶಗಳನ್ನು ಇಟ್ಟುಕೊಂಡು ಅದನ್ನು ಜಾರಿಗೆ ತರಬೇಕು.
ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ರಾಜ್ಯದಲ್ಲಿರುವ 101 ಉಪ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಸಂಘಟನೆಯ ಕಾರ್ಯಾಧ್ಯಕ್ಷ ಮಂಜುನಾಥ ಹಳ್ಳೇರ, ಜಿಲ್ಲಾ ಸಂಚಾಲಕ ಸಂತೋಷ ಕಟ್ಟಿಮನಿ, ಗೋಪಾಲ ನಡಕಿನಮನಿ, ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಕೆ.ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕ ಬೊಮ್ಮಯ್ಯ ಹಳ್ಳೇರ, ನಾಗರಾಜ ದೊಡ್ಮನಿ ಇದ್ದರು.