

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರವೂ ಕೃಷಿ ಪರಿಕರಗಳ ಅಂಗಡಿ ಮುಂದೆ ರೈತರ ಸರದಿ, ನೂಕು-ನುಗ್ಗಾಟ ನಡೆದು ಪೊಲೀಸರ ಬಂದೋಬಸ್ತ್‌ನಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡಲಾಯಿತು.
ಕಳೆದ 8-10 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದರಿಂದ ಮೆಕ್ಕೆಜೋಳ, ಉಳ್ಳಾಗಡ್ಡಿ, ಹತ್ತಿ ಸೇರಿ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ. ಆದರೆ, ರೈತರು ದಿನವೂ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ.
4 ದಿನಗಳ ಹಿಂದಷ್ಟೇ ಪಟ್ಟಣದಲ್ಲಿ 200 ಟನ್ ಯೂರಿಯಾ ಬಂದಿದ್ದರೂ ಅನೇಕ ರೈತರಿಗೆ ಗೊಬ್ಬರ ಸಿಕ್ಕಿರಲಿಲ್ಲ. ಗೊಬ್ಬರ ಬಂದಿರುವ ಸುದ್ದಿ ತಿಳಿದು ರೈತರ ಮಹಿಳೆಯರು, ಮಕ್ಕಳು ಸೇರಿ ನೂರಾರು ರೈತರು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಗೊಬ್ಬರಕ್ಕಾಗಿ ನೂಕುನುಗ್ಗಲು, ಪರಸ್ಪರ ವಾಗ್ವಾದಕ್ಕಿಳಿದ ಘಟನೆಗಳು ನಡೆದವು. ವಿಷಯ ತಿಳಿದ ಪೊಲೀಸರು ರೈತರನ್ನು ಸಾಲಿನಲ್ಲಿ ನಿಲ್ಲಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಪ್ರತಿ ರೈತರಿಗೆ 2 ಚೀಲ ಕೊಟ್ಟು ಸಮಾಧಾನಪಡಿಸಿದರಾದರೂ, ಸರದಿಯಲ್ಲಿದ್ದ ಎಲ್ಲರಿಗೂ ಗೊಬ್ಬರ ಸಿಗಲಿಲ್ಲ.
ತಾಲೂಕಿನಲ್ಲಿಯೇ 16 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಮೆಕ್ಕೆಜೋಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುತ್ತಿದ್ದಾರೆ. ಯೂರಿಯಾ ಖರೀದಿಸಲು ಲಕ್ಷ್ಮೇಶ್ವರಕ್ಕೆ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವಿ, ಸವಣೂರ ತಾಲೂಕಿನ ರೈತರೂ ಬರುತ್ತಾರೆ. ಪೂರೈಕೆ ಕಡಿಮೆಯಿದ್ದು ಬೇಡಿಕೆ ಹೆಚ್ಚಿದ್ದರಿಂದ ಗೊಬ್ಬರದ ಕೊರತೆ ಕಾಡುತ್ತಿದೆ.
ಜಿಲ್ಲೆಗೆ ಗೊಬ್ಬರ ಪೊರೈಕೆಯಲ್ಲಿ ಪ್ರತಿಬಾರಿ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರ ಪೂರೈಕೆ ಮಾಡುತ್ತಿಲ್ಲ. ಯೂರಿಯಾ ಬೇಡಿಕೆ ಬಂಡವಾಳ ಮಾಡಿಕೊಂಡು ಕಂಪನಿಗಳು ಅದರ ಜತೆಗೆ ಇತರ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುವಂತೆ ಕಟ್ಟಳೆ ಹಾಕುತ್ತಿದ್ದಾರೆ. ಇದರಿಂದ ಅಂಗಡಿಕಾರರು ಗೊಬ್ಬರ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಈ ನಡುವೆ ಗೊಬ್ಬರದ ಅಂಗಡಿಗಳಿಂದ ರೈತರ ಹೆಸರಿನಲ್ಲಿ ಕೆಲವರು ಯೂರಿಯಾ ಗೊಬ್ಬರ ಸಂಗ್ರಹಿಸಿ, ಲಾಭಕ್ಕಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ಕೃತಕ ಅಭಾವಕ್ಕೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ರೈತರು ಸ್ಪರ್ಧೆಗಿಳಿದಂತೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದರಿಂದ ಭವಿಷ್ಯದಲ್ಲಿ ಭೂಮಿ ಬರಡಾಗಿ ಮುಂದೆ ಯಾವುದೇ ಬೆಳೆ ಬರುವುದಿಲ್ಲ. ಮೆಕ್ಕೆಜೋಳದ ಜತೆಗೆ ಸಾಂಪ್ರದಾಯಿಕ ಬೆಳೆಯನ್ನು ರೈತರು ಮರೆಯಬಾರದು. ಯೂರಿಯಾ ಅಗತ್ಯವಿದ್ದಲ್ಲಿ ರೈತರು ಹರಳು ಯೂರಿಯಾಕ್ಕೆ ಮುಗಿಬೀಳುವ ಬದಲು ನ್ಯಾನೋ ಯೂರಿಯಾ ಬಳಸಬೇಕು. ರೇವಣಪ್ಪ ಮನಗೂಳಿ, ಸಹಾಯಕ ಕೃಷಿ ನಿರ್ದೇಶಕ ಶಿರಹಟ್ಟಿ