

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಿತಿ ಮೀರಿ ಯೂರಿಯಾ ಬಳಸಬಾರದು ಎಂದು ಕೃಷಿ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜಿಲ್ಲೆಯಲ್ಲಿ ಯೂರಿಯಾ ಬಳಕೆಗೆ ಕಡಿವಾಣ ಬೀಳುವ ಲಕ್ಷಣ ಕಂಡುಬರುತ್ತಿಲ್ಲ. ಅದರಲ್ಲೂ ಅನಗತ್ಯವಾಗಿ ಯೂರಿಯಾ ಖರೀದಿ ಮಾಡುತ್ತಿರುವುದು ಜಿಲ್ಲೆಯಲ್ಲಿ ಯೂರಿಯಾ ಕೃತಕ ಅಭಾವ ಸೃಷ್ಟಿಯಾಗುವಂತಾಗಿದೆ.
ನ್ಯಾನೊ ಯೂರಿಯಾ ಸಿಂಪಡಣೆ ಬಗ್ಗೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರ ಮಾಡುತ್ತಿದೆ ಆದರೆ ಜಿಲ್ಲೆಯ ರೈತರು ನ್ಯಾನೊ ಯೂರಿಯಾ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ಬದಲಿಗೆ ಯೂರಿಯಾ ಖರೀದಿಸಲು ಮುಗಿಬೀಳುತ್ತಿದ್ದು, ಪ್ರತಿದಿನ ಅಗತ್ಯವಿರುವಷ್ಟು ಯೂರಿಯಾ ದಾಸ್ತಾನು ಮಾಡುತ್ತಿದ್ದರೂ ಕೆಲವೇ ಗಂಟೆಗಳಲ್ಲಿ ಯೂರಿಯಾ ನೋಸ್ಟಾಕ್ ಎಂಬ ನಾಮಲಕ ಬೀಳುವಂತಾಗಿದೆ. ನ್ಯಾನೊ ಯೂರಿಯಾ, ಡಿಎಪಿ ದಾಸ್ತಾನು ಇದ್ದರೂ ಇವುಗಳ ಖರೀದಿ ಪ್ರಮಾಣ ಕಡಿಮೆ ಇದೆ. ಕೆಲವು ನೀರಾವರಿ ರೈತರಷ್ಟೇ ಇವುಗಳ ಖರೀದಿಗೆ ಮುಂದಾಗಿದ್ದಾರೆ. ಮಳೆಯಾಶ್ರಿತ ಜಿಲ್ಲೆಯಲ್ಲಿ ಯೂರಿಯಾ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಅನಗತ್ಯ ಆತಂಕ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ ಇದರ ನಡುವೆ ಯೂರಿಯಾ ಕೊರತೆ ಇದೆ ಎಂಬ ವದಂತಿ ಹಬ್ಬಿದ್ದು, ರೈತರು ಆತಂಕಗೊಳ್ಳುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಯೂರಿಯಾ ಕೊರತೆ ಎದುರಾಗಬಹುದು ಎಂಬ ದಾವಂತಕ್ಕೆ ಬಿದ್ದು ಹೆಚ್ಚುವರಿಯಾಗಿ ಯೂರಿಯಾ ಖರೀದಿಸಿ ಮನೆಗಳಲ್ಲಿ ದಾಸ್ತಾನು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಿಂದ ಕೃತಕ ಅಭಾವದ ವಾತಾವರಣ ಸೃಷ್ಟಿಯಾಗುವಂತಾಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ತಿಂಗಳು ಇಂತಿಷ್ಟು ಎಂಬಂತೆ ಜಿಲ್ಲೆಗೆ ಸಾಕಾಗುವಷ್ಟು ಯೂರಿಯಾ ಸರಬರಾಜು ಮಾಡಲಾಗುತ್ತಿದೆ ಪ್ರತಿ ವಾರ ನಿಗಧಿತ ಮಳಿಗೆಗಳಿಗೆ ಯೂರಿಯಾ ಪೂರೈಕೆಯಾಗುತ್ತಿದೆ ಆದರೆ ಹೆಚ್ಚುವರಿ ಯೂರಿಯಾ ಖರೀದಿಗೆ ಮುಗಿಬಿದ್ದಿರುವುದರಿಂದ ಕೊರತೆ ಎದುರಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮಿತಿಮೀರಿದರೆ ವಿಷವಾಗಲಿದೆ: ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಸಬೇಕು ಮಿತಿ ಮೀರಿ ಬಳಸಿದರೆ ಇಳುವರಿಗೆ ವಿಷಕಾರಿಯಾಗಿ ಪರಿಣಮಿಸಲಿದೆ ಎಂದು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದು ರೈತರಿಗೆ ಕೆಲವು ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿರುವ ಕೃಷಿ ಇಲಾಖೆ ಮುಖ್ಯವಾಗಿ ರಸಗೊಬ್ಬರ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸಾಮಾನ್ಯವಾಗಿ ಎಲ್ಲ ಕೃಷಿ ಚಟುವಟಿಕೆಗಳಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡಲಾಗುತ್ತದೆ, ಇದು ಸಸ್ಯಗಳಿಗೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆಯಾದರೂ ಸಾರಜನಕವನ್ನು ಮಾತ್ರ ಒದಗಿಸುತ್ತದೆ ಆದರೆ ರಂಜಕ ಮತ್ತು ಪೊಟ್ಯಾಷಿಯಂನಂತಹ ಇತರೆ ಅಗತ್ಯ ಅಂಶಗಳನ್ನು ಪೂರೈಸುವುದಿಲ್ಲ ಜತೆಗೆ ಇದರ ಬಳಕೆ ಹೆಚ್ಚಾದಷ್ಟು ಅಮೃತವು ವಿಷವಾಗುತ್ತೆ ಎನ್ನುವಂತೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಯೂರಿಯಾ ಬಳಸುವುದು ಉತ್ತಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಯೂರಿಯಾ ಕೊರತೆ ಇಲ್ಲ, ಎಲ್ಲ ಭಾಗಗಳಿಗೂ ಪೂರ್ವನಿಗಧಿಯಂತೆ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಕಳೆದೆರಡು ದಿನದ ಹಿಂದೆಯಷ್ಟೇ 200 ಟನ್‌ನಷ್ಟು ಯೂರಿಯಾ ಬಂದಿದೆ. ಇನ್ನೆರಡು ದಿನದಲ್ಲಿ 800 ಟನ್ ಪೂರೈಕೆಯಾಗಲಿದೆ. ರೈತರು ಸುಖಾಸುಮ್ಮನೆ ಅತಂಕಗೊಂಡು ಹೆಚ್ಚುವರಿಯಾಗಿ ಯೂರಿಯಾ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿಯೂ ಕೊರತೆ ಕಂಡುಬಂದಿಲ್ಲ.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ