ಜನಸಂಖ್ಯೆಗೆ ತಕ್ಕಂತೆ ನಗರ ಯೋಜನೆ ಅಗತ್ಯ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜನಸಂಖ್ಯೆ ಬೆಳವಣಿಗೆಗೆ ತಕ್ಕಂತೆ ನಗರ ಯೋಜನೆ ದೇಶ, ರಾಜ್ಯದಲ್ಲಿ ಅಗತ್ಯವಿದೆ. ಆದರೆ ಆ ಯೋಜನೆ ಸರಿಯಾಗಿ ಇಲ್ಲದ ಕಾರಣ ನಮ್ಮ ನಗರಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗರಗ ರಸ್ತೆಯಲ್ಲಿ ಕೊರವಿ ಡೆವಲಪರ್ಸ್​ ವತಿಯಿಂದ 125 ಎಕರೆ ಜಾಗದಲ್ಲಿ ನಿರ್ಮಿಸುವ ಕೊರವಿ ಗ್ರೀನ್​ ಸಿಟಿಯಲ್ಲಿ ಏರ್ಪಡಿಸಿದ್ದ ಬೃಹತ್​ ವಸತಿ ಬಡಾವಣೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಮಾರ್ಟ್​ ಸಿಟಿ ಯೋಜನೆ ಅಡಿ ನೀಡಿದ ಕೋಟ್ಯಂತರ ರೂ. ಹಣವನ್ನು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿನ ರಸ್ತೆ, ಚರಂಡಿ ನಿರ್ಮಾಣಕ್ಕೆ ಬಳಸಿದ್ದಾರೆ. ಒಂದು ಸ್ಮರಣೀಯ ಯೋಜನೆ ಜಾರಿಗೊಳಿಸಲು ಜನಪ್ರತಿನಿಧಿಗಳು ಸೇರಿ ಅಧಿಕಾರಿಗಳಲ್ಲೂ ಆಸಕ್ತಿ ಕಂಡಿಲ್ಲ. ಇದೇ ಕಾರಣಕ್ಕೆ ಸ್ಮಾರ್ಟ್​ ಸಿಟಿ ಹಣ ಸದ್ಬಳಕೆಯಾಗಿಲ್ಲ. ಆದರೆ ಆ ಯೋಜನೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದ್ದು ಸಮಾಧಾನದ ಸಂಗತಿ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹು-ಧಾ ಸ್ಮಾರ್ಟ್​ ಸಿಟಿಗೆ ಬಂದ ಅನುದಾನ ಕೊಳ್ಳೆ ಹೊಡೆದ ಕಾರಣ ಜನರು ಸ್ಮಾರ್ಟ್​ ಸಿಟಿ ಕಾಣದಂತಾಗಿದೆ. ದುಡ್ಡು ಪಡೆದು ಮತ ಹಾಕುವವರು, ದುಡ್ಡು ನೀಡಿ ಮತ ಪಡೆಯುವವರು ಇರುವವರೆಗೂ ಪ್ರಜಾಪ್ರಭುತ್ವ ಮರೆಯಬೇಕು. ಜನಪ್ರತಿನಿಧಿಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸ್ಥಳ ಹಾಗೂ ಯೋಜನೆ ಅತ್ಯಂತ ಉತ್ತಮವಾಗಿದೆ. ಕೊರವಿ ಅವರು ನಿರ್ಮಿಸುತ್ತಿರುವ ಈ ಗ್ರೀನ್​ ಸಿಟಿ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಇದೊಂದು ಐಡಿಯಲ್​ ಟೌನ್​ಶಿಪ್​ ಆಗುವ ಭರವಸೆ ಇದೆ. ದೇಶದಲ್ಲಿ ಸೂಕ್ತವಾಗಿ ನಗರ ಯೋಜನೆ ರೂಪಿಸುವವರ ಕೊರತೆ ಇದೆ. ಹೀಗಾಗಿ ಸರಿಯಾದ ಅಭಿವೃದ್ಧಿ ಕಾಣುತ್ತಿಲ್ಲ. ನಮ್ಮಲ್ಲೂ ಟೌನ್​ಶಿಪ್​ ಕಲ್ಪನೆ ಬರಬೇಕಿದೆ. ಇಂತಹ ಕಲ್ಪನೆ ಜಾರಿಗೆ ತರುವಲ್ಲಿ ಕೊರವಿ ಅವರು ರೂಪಿಸಿದ ಯೋಜನೆ ಪೂರಕವಾಗಿದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಜನರಿಗೆ ಸಕಲ ಸೌಲಭ್ಯ ನೀಡುವ ಮೂಲಕ ಇಡೀ ಕರ್ನಾಟಕಕ್ಕೇ ಮಾದರಿ ನಗರವಾಗಲಿ. ಕೊರವಿ ಗ್ರೀನ್​ ಸಿಟಿ ಹು-ಧಾದ ನ್ಯೂ ಸ್ಮಾರ್ಟ್​ ಸಿಟಿಯಾಗಲಿ ಎಂದರು.

ನಿವೃತ್ತ ನ್ಯಾಯಾಧೀಶೆ ಎಸ್​. ಸುಜಾತಾ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಿವಪ್ರಭು, ಬಿ.ಎಂ. ಪಾಟೀಲ, ಶಂಕರ ಮುಗದ, ಲೋಕೇಶ ಕೊರವಿ, ಕೊರವಿ ಕುಟುಂಬಸ್ಥರು, ಇತರರು ಇದ್ದರು.

ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಕೊರವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net