ಟನಲ್ ಯೋಜನೆಗೆ ನಗರ ಯೋಜಕರ ಅಪಸ್ವರ: ತಾಂತ್ರಿಕ ಅಂಶಗಳತ್ತ ಗಮನಿಸಲು ಸಲಹೆ

tunnel project
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಮಹಾನಗರದಲ್ಲಿ ಉದ್ದೇಶಿತ ಸುರಂಗ ಯೋಜನೆ ಜಾರಿ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿರುವಾಗಲೇ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ‘ಏಕೀಕೃತ ಸುರಂಗ ಮಾರ್ಗ ಜಾಲ’ ಅನುಷ್ಠಾನಕ್ಕೆ ತರಬೇಕೆಂಬ ಹೊಸ ಪ್ರಸ್ತಾಪ ಮುಂದಿಟ್ಟಿರುವುದು ಸಂಚಲನ ಮೂಡಿಸಿದೆ. ಟನಲ್ ಪ್ರಾಜೆಕ್ಟ್‌ಗೆ ಕೆಲವರಿಂದ ವಿರೋಧ ವ್ಯಕ್ತವಾಗಿರುವಾಗಲೇ ನೆಲದಾಳದಲ್ಲಿ ವಾಹನ ಸಂಚಾರ ಅವೈಜ್ಞಾನಿಕ ಎಂದು ನಗರ ಯೋಜಕರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಭೂ ಮೇಲ್ಮೈ ರಚನೆ ಇತರ ನಗರಗಳಿಗಿಂತ ಭಿನ್ನವಾಗಿದೆ. ಸಮುದ್ರ ಮಟ್ಟದಿಂದ ಸರಿಸುಮಾರು 920 ಮೀಟರ್ ಎತ್ತರದಲ್ಲಿರುವ ಕಾರಣ ಇಲ್ಲಿನ ಹವಾಗುಣ ಪರಿಸರಸ್ನೇಹಿ ರೀತಿ ಇದೆ. ಕೆರೆಗಳ ಜಾಲದಿಂದಾಗಿ ಭೂಮಿ ಒಳಗೆ ಜಲ ಸರಪಳಿ ಅಂತರ್ಜಲ ವೃದ್ಧಿಗೆ ಅವಕಾಶ ಕಲ್ಪಿಸಿದೆ. ಮೇಲಾಗಿ ನಗರದ ಹೆಚ್ಚಿನ ಭೂಪ್ರದೇಶದ ಕೆಳಗೆ ಅತಿ ಕಠಿಣ ಶಿಲಾ ಪದರ ಇರುವುದರಿಂದ ಅದಕ್ಕೆ ಧಕ್ಕೆ ತರುವಂತಹ ಯಾವುದೇ ಯೋಜನೆ ನಗರಕ್ಕೆ ಮಾರಕ ಎಂಬುದು ತಜ್ಞರ ಅಭಿಮತವಾಗಿದೆ.

ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ಟನಲ್ ಯೋಜನೆಯ ಮಾರ್ಗವು ಭೂಮಿಯ 35 ಮೀಟರ್ ಕೆಳಗೆ ನಿರ್ಮಿಸಲಾಗುತ್ತದೆ. ಇಷ್ಟು ಆಳದಲ್ಲಿ ದ್ವಿ ಮಾರ್ಗದ ಸುರಂಗ ಕೊರೆಯುವುದು ಸಾಹಸದ ಕೆಲಸ. ಒಂದು ಕಿ.ಮೀ. ಉದ್ದವನ್ನು ಕೊರೆಯಲು ಕನಿಷ್ಠ 6 ತಿಂಗಳು ಬೇಕು. ಒಮ್ಮೆಲೆ ನಾಲ್ಕು ಕಡೆಯಿಂದ ಕೊರೆಯುವಿಕೆ ಆರಂಭಿಸಿದರೂ ಕಾಮಗಾರಿ ಪೂರ್ಣಕ್ಕೆ 4-5 ವರ್ಷ ಬೇಕು. ಕೊರೆದ ಸುರಂಗವನ್ನು ಸಂಚಾರ ಯೋಗ್ಯ ಮಾಡಲು, ಸುರಕ್ಷತಾ ಕ್ರಮ, ಪರೀಕ್ಷಾರ್ಥ ಸಂಚಾರ ಸೇರಿ ಒಟ್ಟಾರೆ ಏಳೆಂಟು ವರ್ಷ ಹಿಡಿಯಲಿದೆ. ಇಂತಹ ಕ್ಲಿಷ್ಟಕರ ಯೋಜನೆ ಜಾರಿ ಬದಲು ಪರ್ಯಾಯದತ್ತ ದೃಷ್ಟಿ ಹರಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಡಿಮೆ ದೂರದ ಮಾರ್ಗಕ್ಕೆ ಒಲವು:

ಉದ್ದೇಶಿತ ಟನಲ್ ಮಾರ್ಗವು ಹೆಬ್ಬಾಳ ಕೆರೆ ಕೋಡಿಯಿಂದ ಸಿಲ್ಕ್ ಬೋರ್ಡ್ ವರೆಗೆ 16.75 ಕಿ.ಮೀ. ಉದ್ದವಿರಲಿದೆ. ಇದರ ಬದಲು ಸಂಚಾರ ಸಿಕ್ಕು ಸ್ಥಳಗಳನ್ನು ಗುರುತಿಸಿ ಅಲ್ಲಿ ಮಾತ್ರ 2-3 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಬಹುದು. ಇಂತಹ ಕೆಲ ಮಾರ್ಗಗಳನ್ನು ‘ಏಕೀಕೃತ ಸುರಂಗ ಮಾರ್ಗ ಜಾಲ’ವನ್ನಾಗಿ ಕೈಗೆತ್ತಿಕೊಂಡಲ್ಲಿ ಟ್ರಾಫಿಕ್ ತಗ್ಗಬಹುದು.

ಪ್ರಸ್ತುತ ನಗರದಲ್ಲಿ ಕೆ.ಆರ್.ಪುರ, ಮಾರತ್‌ಹಳ್ಳಿ, ಬೆಳ್ಳಂದೂರು, ಕೋರಮಂಗಲ, ಜೆ.ಪಿ.ನಗರ, ಬನಶಂಕರಿ, ಕೆಂಗೇರಿ, ಗೊರಗುಂಟೆಪಾಳ್ಯ, ಯಶವಂತಪುರ, ಹೆಬ್ಬಾಳ ಜಂಕ್ಷನ್‌ಗಳಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಇದೆ. ಈ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಒಂದೆರಡು ಮಾರ್ಗಗಳನ್ನು ಆಯ್ಕೆ ಮಾಡಿ ಕಡಿಮೆ ದೂರದ ಸುರಂಗ ಮಾರ್ಗವನ್ನು ನಿರ್ಮಿಸಬಹುದು. ಮುಖ್ಯವಾಗಿ ಈ ಮಾರ್ಗಗಳಲ್ಲಿ ಎಲ್ಲ ರೀತಿಯ ವಾಹನಗಳು ಸಂಚರಿಲು ಅವಕಾಶ ಕಲ್ಪಿಸಿದರೆ ನಗರದ ಟ್ರಾಫಿಕ್ ಸಮಸ್ಯೆಯನ್ನು ತಕ್ಕಮಟ್ಟಿಗೆ ಸುಧಾರಿಸಬಹುದು ಎಂಬ ಸಲಹೆಯನ್ನು ತಜ್ಞರು ಮುಂದಿಟ್ಟಿದ್ದಾರೆ.

ಸಮೂಹ ಸಾರಿಗೆಗೆ ಒತ್ತು ಸಿಗಲಿ:

ಬೆಂಗಳೂರಿನಲ್ಲಿ 1.3 ಕೋಟಿ ಜನರಿದ್ದು, 1.2 ಕೋಟಿ ವಾಹನಗಳು ಇವೆ. ಹೆಚ್ಚಿನ ಮಂದಿ ದುಡಿಯುವ ವರ್ಗಕ್ಕೆ ಸೇರಿರುವುದರಿಂದ ನಿತ್ಯ ವಾಹನ ಸಂಚಾರ ಅನಿವಾರ್ಯ. ಅದರಲ್ಲೂ ಒಟ್ಟು ವಾಹನಗಳ ಪೈಕಿ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ದ್ವಿಚಕ್ರವಾಹನಗಳಾಗಿವೆ. ಈ ಸವಾರರನ್ನು ಬಸ್, ಮೆಟ್ರೋ ಸೇರಿ ಸಮೂಹ ಸಾರಿಗೆಯಡಿ ಓಡಾಡುವಂತೆ ಮಾಡಿದ್ದಲ್ಲಿ ಅರ್ಧದಷ್ಟು ಸಂಚಾರ ಸಮಸ್ಯೆ ನೀಗಲಿದೆ. ಈ ಮಾರ್ಗೋಪಾಯವನ್ನು ಸರ್ಕಾರ ಆದ್ಯತೆ ಮೇರೆಗೆ ಕೈಗೊಂಡು ಮೊಬಿಲಿಟಿಗೆ ಹೆಚ್ಚು ಒತ್ತು ನೀಡಬೇಕು ಎಂದು ನಗರ ಯೋಜಕರು ಸಲಹೆ ನೀಡಿದ್ದಾರೆ.

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಸ್ಪಷ್ಟ ಹಾಗೂ ಸಮಗ್ರ ರೂಪದ ಯೋಜನೆ ರೂಪಿಸಬೇಕು. ಸಮೂಹ ಸಾರಿಗೆ ಬಳಸುವಂತೆ ಸರ್ಕಾರ ಜನರಿಗೆ ತಿಳಿ ಹೇಳಬೇಕು. ಈ ಕೆಲಸವನ್ನು ಮಾಡದೆ ರಾಜಕೀಯ ಉದ್ದೇಶಕ್ಕೆ ಟನಲ್ ಯೋಜನೆಗೆ ಆದ್ಯತೆ ನೀಡಿದರೆ ತೆರಿಗೆದಾರರ ಹಣ ಪೋಲಾಗುತ್ತದೆಯೆ ಹೊರತು ಸಂಚಾರ ಸಿಕ್ಕುಗೆ ಪರಿಹಾರ ಸಿಗದು.

- ಕಾತ್ಯಾಯಿನಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ

ವಿಶ್ವದ ದೊಡ್ಡ ನಗರಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆಗೆ ಅಲ್ಲಿನ ಸರ್ಕಾರಗಳು ಮಣೆ ಹಾಕಿವೆ. ಅಲ್ಲಿನ ಜನರು ಕೂಡ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ಗೆ ಹೊಂದಿಕೊಂಡಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳು ಹೆಚ್ಚಿರುವುದರಿಂದ ರಸ್ತೆ ಸಂಚಾರ ಯಾತನಾಮಯ. ಬಸ್, ಮೆಟ್ರೋ, ರೈಲು ಸಂಚಾರವನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಲಿ.

- ಶ್ರಿನಿವಾಸ್ ಅಲಿವಿಲ್ಲಿ, ಸಾಮಾಜಿಕ ಕಾರ್ಯಕರ್ತ

ನಗರದ ಪರಿಸರವು ವಾಹನ ಮಾಲಿನ್ಯದಿಂದ ಹದೆಗೆಟ್ಟಿದೆ. ರಸ್ತೆ ವಿಸ್ತರಣೆ ಹೆಸರಿನಲ್ಲಿ ಬೃಹತ್ ಮರಗಳಿಗೆ ಕೊಡಲಿ ಹಾಕಲಾಗುತ್ತಿದೆ. ಜಲ ಮೂಲಗಳೂ ಮಲೀನಗೊಂಡಿವೆ. ಇದರಿಂದಾಗಿ ಜನರು ಉಸಿರಾಡಲು ಆಮ್ಲಜನಕದ ಕೊರತೆ ಎದುರಿಸುತ್ತಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಡೆ ಟನಲ್ ಯೋಜನೆ ಜಾರಿಗೆ ಆದ್ಯತೆ ಸಲ್ಲ. ಪರಿಸರಸ್ನೇಹಿ ಯೋಜನೆಗಳಿಗೆ ಮಾತ್ರ ಆದ್ಯತೆ ಸಿಗಲಿ.

- ಅ.ನ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net