

ಮಂಡ್ಯ: ನಗರದ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸವಲತ್ತು ನೀಡಿ. ಅಂತೆಯೇ ಈ ಯೋಜನೆಯಡಿ ನಿರ್ಮಿಸಲಾಗುತ್ತಿರುವ ವಸತಿಗಳ ಕಾಮಗಾರಿಯನ್ನು ಚುರುಕುಗೊಳಿಸಿ ತ್ವರಿತವಾಗಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.
ನಗರ ಪ್ರದೇಶಗಳಿಗೆ ನೀಡಲಾಗುವ ನೀರಿನ ಗುಣಮಟ್ಟವನ್ನು ನಿಗದಿತ ಅವಧಿಯೊಳಗೆ ಪರೀಕ್ಷೆ ನಡೆಸಿ. ನೀರಿನ ಗುಣಮಟ್ಟ ಪರೀಕ್ಷಿಸಲು ಪ್ರತಿದಿನ ಕನಿಷ್ಟ ಮೂರು ಮಾದರಿ ಸಂಗ್ರಹಿಸಿ. ಮುಖ್ಯವಾಗಿ ಪರೀಕ್ಷೆಯ ನಂತರ ಅಗತ್ಯ ಪ್ಯಾರಾಮೀಟರ್‌ಗಳಿಗಿಂತ ಕಡಿಮೆ ಗುಣಮಟ್ಟವಿರುವ ಕುಡಿಯುವ ನೀರಿನ ಮಾದರಿ ಕಂಡುಬಂದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನಗರ ಭಾಗಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸದೆ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ಟೆಂಡರ್‌ದಾರರೊಂದಿಗೆ ಮಾತನಾಡಿ ಸರಿಯಾಗಿ ವಿಲೇವಾರಿ ಮಾಡಿಸಿ. ಇಲ್ಲವಾದಲ್ಲಿ ಟೆಂಡರ್ ರದ್ದುಪಡಿಸಿ. ನಗರ ಪ್ರದೇಶಗಳ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಪಾಂಡವಪುರ, ಬೆಳ್ಳೂರು, ನಾಗಮಂಗಲ ಹಿಂದುಳಿದಿದೆ. ನೀರಿನ ಶುಲ್ಕ ಪಾವತಿಯಲ್ಲಿ ನಾಗಮಂಗಲ ಮತ್ತು ಮಂಡ್ಯ ನಗರಗಳಲ್ಲಿ ಹೆಚ್ಚಾಗಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ತೆರಿಗೆ ಪಾವತಿಸದೆ ಇರುವವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್, ನಗರಸಭೆ ಆಯುಕ್ತೆ ಪಂಪಶ್ರೀ, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ ಇತರರಿದ್ದರು.