ವಾರಕ್ಕೊಮ್ಮೆ ನೀರಿನ ಶುದ್ಧತೆ ಪರಿಶೀಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Urban Local Bodies Progress Review Meeting Mandya
Published on

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳು ನೀರಿನ ಗುಣಮಟ್ಟ ಪರಿಶೀಲನೆಯನ್ನು ಈ ಹಿಂದೆ 15 ದಿನಕ್ಕೊಮ್ಮೆ ಮಾಡುತ್ತಿವೆ. ಆದರೆ ಮುಂದಿನ ದಿನದಲ್ಲಿ ಕಡ್ಡಾಯವಾಗಿ ವಾರಕ್ಕೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಮೂಲದಲ್ಲಿ ಪರಿಶೀಲಿಸುವುದರ ಜತೆಗೆ ಅದರ ವಿತರಣಾ ಬಿಂದುವಿನಲ್ಲೂ ಸಹ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅವರು ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಪರಿಶೀಲಿಸಬೇಕು. ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಿಂದ ವಾರಕೊಮ್ಮೆ ಮಾದರಿ ನೀಡಿ ನೀರಿನ ಗುಣಮಟ್ಟ ವನ್ನು ಪರಿಶೀಲಿಸಬೇಕು ಎಂದರು.

ಕುಡಿಯುವ ನೀರು ಸಂಗ್ರಹಿಸಿ ವಿತರಣೆ ಮಾಡುವ ಓವರ್ ಹೆಡ್‌ಟ್ಯಾಂಕ್ ಹಾಗೂ ಜಲ ಸಂಗ್ರಹಗಾರಗಳನ್ನು ಕಡ್ಡಾಯವಾಗಿ ವರ್ಷಕ್ಕೆ ಎರಡು ಬಾರಿ ಶುಚಿಗೊಳಿಸಿ ವರದಿ ನೀಡಬೇಕು. ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತ ಬಡವರ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ನಗರಸಭೆ ಕಚೇರಿ ವತಿಯಿಂದ ಪ್ರಚಾರ ಕೈಗೊಂಡು ಅರ್ಜಿ ಸ್ವೀಕರಿಸಿ ನಿವೇಶನ ಹಾಗೂ ವಸತಿ ರಹಿತರ ಮಾಹಿತಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ದಿಗಾಗಿ ಮಂಜೂರಾಗಿರುವ ಅನುದಾನವನ್ನು ವೆಚ್ಚ ಮಾಡಿ ಶೇ.100 ರಷ್ಟು ಗುರಿ ಸಾಧಿಸಬೇಕು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಆಹಾರದ ಶುದ್ಧತೆ, ಪ್ರಮಾಣ ಮತ್ತು ಗ್ರಾಹಕರ ತೃಪ್ತಿ ಎಲ್ಲದರ ಬಗ್ಗೆ ಗಮನಹರಿಸಿ ಗ್ರಾಹಕರಿಗೆ ಪ್ರತಿ ದಿನ ಆರೋಗ್ಯಕರ ಆಹಾರ ಒದಗಿಸಬೇಕು ಎಂದರು.

ಇ-ಆಸ್ತಿ ಖಾತಾ ಅಭಿಯಾನದ ಕೆಲಸ ಚುರುಕುಗೊಳಿಸಿ. ಸಾರ್ವಜನಿಕರಲ್ಲಿ ಇ-ಆಸ್ತಿ ಖಾತಾದ ಉಪಯುಕ್ತತತೆ ಬಗ್ಗೆ ಮಾಹಿತಿ ನೀಡಿ. ಪ್ರತಿ ದಿನ ಸಾರ್ವಜನಿಕರಿಂದ 15 ರಿಂದ 40 ಇ-ಖಾತಾ ನೋಂದಣಿ ಮಾಡಿಸುವಂತೆ ಗುರಿ ನೀಡಿ ಹಾಗೂ ನೋಂದಣಿಯ ಮಾಹಿತಿ ವರದಿಯನ್ನು ಪ್ರತಿದಿನ ಕಲ್ಪಿಸಬೇಕು. ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಉಳಿತಾಯವಾಗಿರುವ ಹಣವನ್ನು ಸಮಪರ್ಕವಾಗಿ ಗೃಹ ಅಭಿವೃದ್ಧಿಗಾಗಿ ಬಳಸಿ. ನಿವೇಶನ ರಹಿತರಿಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ನಿವಾರಿಸಿ ಫಲನುಭವಿಗಳಿಗೆ ನಿವೇಶನ ಒದಗಿಸುವಲ್ಲಿ ಕೆಲಸ ನಿರ್ವಹಿಸಿ ಎಂದು ಹೇಳಿದರು.

ಸಭೆಯಲ್ಲಿ ನಗರಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣ ಗೌಡ, ಪೌರಾಯುಕ್ತೆ ಯು.ಪಿ.ಪಂಪಶ್ರೀ ಸೇರಿದಂತೆ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net