ಪ್ರಗತಿ ಸಾಧಿಸದವರಿಗೆ ನೋಟಿಸ್ ಜಾರಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Urban Local Bodies Progress Review Meeting Mandya
Published on

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಪ್ರಗತಿ ಸಾಧಿಸಲು ಸೂಚನೆ ನೀಡಲಾಗಿತ್ತು. ಆದರೆ ನಿಗದಿಪಡಿಸಿದ ಗುರಿ ಸಾಧಿಸದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಕೆಲಸಕ್ಕಾಗಿ ಬಿಡುಗಡೆಯಾಗುವ ಅನುದಾನ ಸಂಪೂರ್ಣವಾಗಿ ಪಾರದರ್ಶಕವಾಗಿ ವೆಚ್ಚವಾಗಬೇಕು. ಕುಡಿಯುವ ನೀರಿನ ಪರೀಕ್ಷೆ ನಿಯಮಿತವಾಗಿ ನಡೆಸಬೇಕು. ಅದರ ವರದಿಯನ್ನು ಪಡೆದುಕೊಳ್ಳಬೇಕು. ಕಲುಷಿತ ನೀರಿನಿಂದ ಯಾವುದಾದರೂ ತೊಂದರೆಯಾದಲ್ಲಿ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ವಚ್ಛತಾ ಹೀ ಸೇವಾ ಆಂದೋಲನವನ್ನು ಸೆ.15ರಿಂದ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶೌಚಗೃಹ ಪೂರ್ಣಗೊಳಿಸಿ ಉದ್ಘಾಟನೆಗೊಳಿಸಿದರೆ ಅರ್ಥಯುತವಾಗಿರುತ್ತದೆ. ಸರ್ಕಾರದಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳಿಗೆ ಆಸ್ತಿ ತೆರಿಗೆಯನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಆಸ್ತಿ ತೆರಿಗೆಯ ಪ್ರಗತಿ ಶೇ.56ರಷ್ಟಿದ್ದು, ಸಂಗ್ರಹಣೆಯ ಕೆಲಸ ಚುರುಕುಗೊಳಿಸಬೇಕು. ಇನ್ನು ಪೈಪ್‌ಲೈನ್ ಮೂಲಕ ಎಲ್‌ಪಿಜಿ ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾಮಗಾರಿಗೆ ಎ.ಜಿ ಆ್ಯಂಡ್ ಪಿ ಪ್ರಥಮ್ ಸಂಸ್ಥೆಯವರು ಮಂಡ್ಯ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಪೈಪ್, ಯು.ಜಿ.ಡಿ ಪೈಪ್‌ಲೈನ್ ಇರುತ್ತದೆ. ಆದ್ದರಿಂದ ಎಲ್.ಪಿ.ಜಿ ಪೈಪ್‌ಲೈನ್ ಕಾಮಗಾರಿಯಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಂಡ ನಂತರ ಅಗೆದಿರುವ ರಸ್ತೆಯನ್ನು ಸರಿಪಡಿಸಿರುವ ಬಗ್ಗೆ ಖಾತ್ರಿ ಪಡೆಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮಂಡ್ಯ ನಗರ ಪ್ರದೇಶದಲ್ಲಿ ಪೈಪ್‌ಲೈನ್ ಮೂಲಕ ಎಲ್‌ಪಿಜಿ ಅನಿಲ ವಿತರಣೆ ಯೋಜನೆಯಡಿ 6,500 ಸಂಪರ್ಕ ನೀಡುವ ಗುರಿ ಹೊಂದಿದ್ದು, ಶೀಘ್ರದಲ್ಲೇ ಮಂಡ್ಯ ನಗರಸಭೆಯ ಎರಡು ವಾರ್ಡ್‌ಗಳಿಗೆ ಒದಗಿಸಲು ಯೋಜಿಸಲಾಗಿದೆ ಎಂದು ಪ್ರಥಮ್ ಸಂಸ್ಥೆಯ ಉಪವಲಯ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪೈಪ್‌ಲೈನ್ ಮೂಲಕ ಎಲ್‌ಪಿಜಿ ಅನಿಲ ವಿತರಣೆಯ ಅನುಕೂಲತೆಯ ಬಗ್ಗೆ ಸಂಸ್ಥೆಯವರು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಂಡ್ಯ ನಗರಸಭೆಯೊಂದಿಗೆ ನಿರಂತರವಾಗಿ ಸಂಸ್ಥೆಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಒಬ್ಬರೂ ಸ್ಥಳೀಯ ಅಧಿಕಾರಿಯನ್ನು ನಿಯೋಜಿಸಬೇಕು ಎಂದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾಮಣಿ, ಎ.ಜಿ ಆ್ಯಂಡ್ ಪಿ ಪ್ರಥಮ್ ಸಂಸ್ಥೆಯ ಸಂಜಿತ್, ಚರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net