ಸರಿಯಾಗಿ ನಡೆಯುತ್ತಿಲ್ಲ ನಗರೋತ್ಥಾನ ಕಾಮಗಾರಿ

31MDG1 TMC SABHE
Published on

ಮುಂಡರಗಿ: ನಗರೋತ್ಥಾನ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕೆಲವೆಡೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಗುಣಮಟ್ಟ ಪರಿಶೀಲಿಸುವ ಕೆಲಸ ಮಾಡಿಲ್ಲ. ಈ ಬಗ್ಗೆ ತ್ವರಿತಗತಿ ಗುಣಮಟ್ಟದಲ್ಲಿ ಕಾಮಗಾರಿ ಕೈಗೊಳ್ಳುವ ಕುರಿತು ಚರ್ಚಿಸಲು ಜ.4ರಂದು ಜಿಲ್ಲಾಧಿಕಾರಿ ಬಳಿ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಸದಸ್ಯರು ನಿಯೋಗ ತೆರಳಲು ಮುಖ್ಯಾಧಿಕಾರಿಗಳು ಮುಂದಾಗಬೇಕು ಎಂದು ಪಪಂ ಸದಸ್ಯ ಲಿಂಗರಾಜಗೌಡ ಪಾಟೀಲ ಆಗ್ರಹಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. 15ನೇ ಹಣಕಾಸು ಯೋಜನೆಯಡಿ 74.27ಲಕ್ಷ ರೂ. ಎಸ್‌ಎಫ್‌ಸಿ ಕಾಮಗಾರಿ ಕೈಗೊಂಡು 7 ತಿಂಗಳಾದರೂ ಪೂರ್ಣಗೊಳಿಸಿಲ್ಲ. ಯಾವ ಕಾರಣಕ್ಕೆ ಪೂರ್ಣಗೊಳಿಸಿಲ್ಲ ಎಂದು ಪ್ರಶ್ನಿಸಿದರು.

‘5 ವರ್ಷಗಳು ಕಳೆದರೂ ನಮ್ಮ ವಾರ್ಡ್‌ನಲ್ಲಿ ಯಾವ ಕಾಮಗಾರಿಗಳನ್ನು ಈವರೆಗೂ ಮಾಡಿಲ್ಲ. ಯಾವಾಗ ಕೆಲಸ ಮಾಡುತ್ತೀರಿ’ ಎಂದು ಶಿವಪ್ಪ ಚಿಕ್ಕಣ್ಣವರ ಕೇಳಿದರು.

ಕಮಿಟಿಯು ಹೇಳಿದಂತೆ ಕೆಲಸ ಮಾಡುವುದಾದರೆ ಮಾಡಬೇಕು. ಇಲ್ಲದಿದ್ದರೆ ತಾವು ಇಲ್ಲಿ ಕೆಲಸ ಮಾಡುವುದು ಅಗತ್ಯವಿಲ್ಲ. ನಮ್ಮ ಅವಧಿಯಲ್ಲಿ 23ವಾರ್ಡ್‌ಗಳಲ್ಲಿ ಎಷ್ಟೆಷ್ಟು ಅನುದಾನದಲ್ಲಿ ಕಾಮಗಾರಿ ಕೈಗೊಂಡಿದ್ದೀರಿ? ಎನ್ನುವ ಮಾಹಿತಿಯನ್ನು ಸಭೆಗೆ ತಿಳಿಸಬೇಕು ಎಂದು ನಾಗರಾಜ ಹೊಂಬಳಗಟ್ಟಿ ಆಗ್ರಹಿಸಿದರು.

ಈ ಬಗ್ಗೆ ಕಿರಿಯ ಇಂಜಿನಿಯರ್ ಇಬ್ರಾಹಿಂ ಅವರು ಸಮರ್ಪಕ ಮಾಹಿತಿ ನೀಡಲಿಲ್ಲ. ಪ್ರತಿಕ್ರಿಯಿಸಿದ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರು, ಸಮರ್ಪಕ ಕಾಮಗಾರಿ ಮಾಡುವುದಕ್ಕೆ ಇಂಜಿನಿಯರಿಂಗ್ ವಿಭಾಗದವರು ಮುಂದಾಗಬೇಕು ಎಂದು ಸೂಚಿಸಿದರು.

ಕೆಲ ಭಾಗದಲ್ಲಿ ಶೌಚಗೃಹ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದು, ಸಂಚಾರಿ ಶೌಚಗೃಹ ವ್ಯವಸ್ಥೆಗೆ ಮುಂದಾಗಬೇಕು ಎಂದು ನಾಗರಾಜ ಒತ್ತಾಯಿಸಿದರು. ಇಲ್ಲಿ 13 ಸಮುದಾಯ ಶೌಚಗೃಹ ಇದ್ದು, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರಲ್ಹಾದ ಹೊಸಮನಿ ದೂರಿದರು.

ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕೆಲವೆಡೆ ಜನರೇ ಸಮುದಾಯ ಶೌಚಗೃಹ ಸರಿಯಾಗಿ ಬಳಕೆ ಮಾಡುತ್ತಿಲ್ಲ. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಟ್ಟಿದ್ದರೂ ಬಳಕೆ ಮಾಡುತ್ತಿಲ್ಲ. ಜಾಗೃತಿ ಮೂಡಿಸಿದ್ದೇವೆ ಎಂದರು.

ಪಟ್ಟಣದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದಕ್ಕೆ ಅವಕಾಶ ನೀಡಬಾರದು. ಅಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ರಫಿ ಮುಲ್ಲಾ, ಸದಸ್ಯರಾದ ಕವಿತಾ ಉಳ್ಳಾಗಡ್ಡಿ, ಜ್ಯೋತಿ ಹಾನಗಲ್ಲ, ಟಿ.ಬಿ. ದಂಡಿನ, ಪ್ರಕಾಶ ಹಲವಾಗಲಿ, ದೇವಕ್ಕ ದಂಡಿನ, ಸುಮಾ ಬಳ್ಳಾರಿ, ರೈಮಾನಸಾಬ ಮಲ್ಲನಕೇರಿ, ರಾಜಾಭಕ್ಷಿ ಬೆಟಗೇರಿ ಇತರರು ಇದ್ದರು.

40 ಮನೆಗಳ ಉತಾರ ಇಲ್ಲ

ಅಂಬೇಡ್ಕರ್ ನಗರದಲ್ಲಿ ಅಂದಾಜು 40 ಮನೆಗೆ ಉತಾರ ಇಲ್ಲ. 30 ಮನೆಗಳ ಉತಾರದಲ್ಲಿ ಸರ್ಕಾರ ಅಂತ ಇದೆ. ತಲೆಮಾರಿನಿಂದ ವಾಸವಿರುವ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಅಕ್ರಮ-ಸಕ್ರಮದಲ್ಲಾದರೂ ಉತಾರ ನೀಡಬೇಕು ಎಂದು ಪವನ ಮೇಟಿ, ಸಂತೋಷ ಹಿರೇಮನಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಸ್ಥಳ ಪರಿಶೀಲನೆ ನಡೆಸಿ, ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net