ಊರಮ್ಮ ದೇವಿ ದೇವಸ್ಥಾನ ಲೋಕಾರ್ಪಣೆ

Kudlgi Uramma Devi
ಕೂಡ್ಲಿಗಿ ಪಟ್ಟಣದ ಊರಮ್ಮ ದೇವಿ ನೂತನ ದೇವಸ್ಥಾನವನ್ನು ಶುಕ್ರವಾರ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು, ಜೋಯಿಸ್ ವೇಣುಗೋಪಾಲ ಇತರರಿದ್ದರು.
Published on

ಕೂಡ್ಲಿಗಿ: ಉಜ್ಜಿನಿ ಜಗದ್ಗುರುಗಳು, ವಾಲ್ಮೀಕಿ ಗುರುಪೀಠದ ಶ್ರೀಗಳು ಹಾಗೂ ಕೂಡ್ಲಿಗಿ ಹಿರೇಮಠದ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶುಕ್ರವಾರ ಪಟ್ಟಣದ ಊರಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ, ಕಲಶಾರೋಹಣ ಹಾಗೂ ಕರಿಗಲ್ಲು ಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ 7 ಗಂಟೆಗೆ ಉಜ್ಜಿನಿ ಸದ್ಧರ್ಮದ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರನ್ನು ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಲಾಯಿತು.

ಶ್ರೀಗಳು ಮೊದಲಿಗೆ ಕರೆಗಲ್ಲಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಊರಮ್ಮ ದೇವಸ್ಥಾನದ ಬಾಗಿಲು ತೆರೆದ ಸ್ವಾಮೀಜಿಗಳು ದೇವಿಗೆ ಜೀವ ಕಳೆ ತುಂಬಿದರು. ತದನಂತರ ಕಲಶಾರೋಹಣ ಮಾಡಲಾಯಿತು. ಈ ವೇಳೆ ಭಕ್ತರು ಊರಮ್ಮ ಮಾತೆಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು.

ಪಟ್ಟಣದ ಸಾವಿರಾರು ಭಕ್ತರು ಊರಮ್ಮ ದೇವಿಯ ದರ್ಶನ ಪಡೆದರು, ಮಹಿಳೆಯರು ಸೀರೆ ಉಡಿ, ಹಣ್ಣು, ಕಾಯಿ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮೊದಲು ಬೆಳಗಿನ ಜಾವ ನೂತನ ಕರೆಗಲ್ಲು ಸ್ಥಾಪನೆ ಮಾಡಿ, ಪೂಜೆ ನೆರವೇರಿಸಲಾಗಿತ್ತು. ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಮಂಗಳವಾರ, ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಎನ್.ಟಿ.ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಬಿ.ಶ್ರೀರಾಮುಲು, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net