

ಕೂಡ್ಲಿಗಿ: ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಜಾತ್ರೋತ್ಸವಕ್ಕೆ ಮಂಗಳವಾರ ಚಾಲನೆ ಸಿಕ್ಕಿದ್ದು, ಮೇ 22ರಂದು ರಥೋತ್ಸವ ಜರುಗಲಿದೆ. ಮೂರು ದಿನದ ಜಾತ್ರೆಯಲ್ಲಿ ನಾನಾ ಧಾರ್ಮಿಕ ಕೈಂಕರ್ಯ ನೇರವೇರಿಸಲಾಯಿತು.
ಇದನ್ನೂ ಓದಿ:ಊರಮ್ಮ ದೇವಿ ಜಾತ್ರೆ ಸಂಪನ್ನ
ಮಂಗಳವಾರ ಸಂಜೆ ಕುಂಬಾರ ಮನೆಗೆ ಹೋಗಿ ಕೇಲು (ಕುಂಭ) ತರಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಊರಮ್ಮನ ಬಾವಿಗೆ ತೆರಳಿ ಗಂಗೆ ಪೂಜೆ ನೆರೆವೇರಿಸಿ ದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ರಂಗಮಂಟಪಕ್ಕೆ ತರಲಾಯಿತು. ದಾರಿಯುದ್ದಕ್ಕೂ ಮಹಿಳೆಯರು ಹಣ್ಣು, ಕಾಯಿ, ಉಡಿ ತುಂಬಿ ಭಕ್ತಿ ಸಮರ್ಪಿಸಿದರು.
ಬುಧವಾರ ಬೆಳಗ್ಗೆ ಗ್ರಾಮದ ಸುತ್ತಲೂ ಚರಗ ಚೆಲ್ಲಲಾಯಿತು. ನಂತರ ರಥಕ್ಕೆ ಜಲ್ಲಿ ಪುಟ್ಟಿ ಏರಿಸಿ, ಕಲಶ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನದಲ್ಲಿ ಭಕ್ತರು ದೇವಿಗೆ ಉಡಿ ಕೊಟ್ಟು, ಹರಕೆ ತೀರಿಸಿದರು. ಗುರುವಾರ ಸಂಜೆ 5 ಗಂಟೆಗೆ ರಥೋತ್ಸವ ನಡೆಯಲಿದೆ. ಲಕ್ಷ್ಮೀ ಬಜಾರದಿಂದ ಹೊರಡುವ ರಥ ಮದಕರಿ ವೃತ್ತ, ಆಂಜನೇಯ ಪಾದಗಟ್ಟೆ, ಅಂಬೇಡ್ಕರ್ ವೃತ್ತದ ಮೂಲಕ ಊರಮ್ಮನ ಪಾದಗಟ್ಟೆ ತಲುಪಲಿದೆ. ಮಹಾ ಮಂಗಳಾರತಿ ನಂತರ ರಥೋತ್ಸವ ಸಂಪನ್ನಗೊಳಿಸಲಾಗುವುದು.
ನೂತನ ದೇವಸ್ಥಾನ ನಿರ್ಮಾಣ: 2011ರ ಬಳಿಕ 2020ರಲ್ಲಿ ಜಾತ್ರೆ ಆಯೋಜಿಸಲಾಗಿತ್ತು. ಆದರೆ, ಕೋವಿಡ್‌ನಿಂದಾಗಿ ಮುಂದೂಡಲಾಯಿತು. ಆಗ ಜಾತ್ರೆಗಾಗಿ ಸಂಗ್ರಹಿಸಿದ್ದ ಹಣದೊಂದಿಗೆ ಒಟ್ಟು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಿ, ಕಳೆದ ಶ್ರಾವಣದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಜಾತ್ರೋತ್ಸವ ಹಿನ್ನೆಲೆಯಲ್ಲಿ ಪಟ್ಟಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.