ಸದಾ ಮುಚ್ಚಿರುವ ನಮ್ಮ ಕ್ಲಿನಿಕ್

13-MAY-GPT-1
ur clinic is always closed.
Published on

ಗುಂಡ್ಲುಪೇಟೆ: ಎರಡು ತಿಂಗಳ ಹಿಂದೆ ಪಟ್ಟಣದಲ್ಲಿ ಉದ್ಘಾಟನೆಯಾದ ನಮ್ಮ ಕ್ಲಿನಿಕ್ ಬಾಗಿಲು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುವುದರಿಂದ ಪಟ್ಟಣದ ನಿವಾಸಿಗಳಿಗೆ ಆರೋಗ್ಯ ಸವಲತ್ತು ಒದಗಿಸುವ ಸಲುವಾಗಿ ಸರ್ಕಾರ ಆಯ್ದ ಸ್ಥಳಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸುತ್ತಿದೆ. ಸರ್ಕಾರಿ ಕಟ್ಟಡಗಳು ಲಭ್ಯ ಇಲ್ಲದ ಕಾರಣ ಆರೋಗ್ಯ ಇಲಾಖೆಯು ಮಾಸಿಕ 16 ಸಾವಿರ ರೂ. ದುಬಾರಿ ಬಾಡಿಗೆ ತೆತ್ತು ಖಾಸಗಿ ವ್ಯಕ್ತಿಗಳಿಗೆ ಸೇರಿದ ಬಾಡಿಗೆ ಕಟ್ಟಡಗಳಲ್ಲಿ ಕ್ಲಿನಿಕ್ ತೆರೆದಿದೆ. ಒಬ್ಬರು ವೈದ್ಯ, ಇಬ್ಬರು ಸ್ಟಾಫ್ ನರ್ಸ್ ಹಾಗೂ ಒಬ್ಬ ಡಿ.ಗ್ರೂಪ್ ನೌಕರರು ಇಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಆರು ತಿಂಗಳ ಹಿಂದೆ ಒಕ್ಕಲಗೇರಿಯಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಿದ್ದರೆ ಮಾ.23ರಂದು ಪಟ್ಟಣದ ಅಶ್ವಿನಿ ಬಡಾವಣೆ(ದ.ರಾ.ಬೇಂದ್ರೆ ನಗರ)ದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಿದೆ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕ್ಲಿನಿಕ್ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕ್ಲಿನಿಕ್‌ಗೆ ಅಗತ್ಯ ಸಿಬ್ಬಂದಿ ನಿಯೋಜಿಸದ ಪರಿಣಾಮ ಅಂದಿನಿಂದಲೂ ಕ್ಲಿನಿಕ್ ಬಾಗಿಲು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಉದ್ಘಾಟನೆ ಮಾಡಿದರೆ ಸಾಲದು ಅದನ್ನು ಸಾರ್ವಜನಿಕರ ಬಳಕೆಗೆ ತರಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.

ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ: ತಾಲೂಕು ಆಸ್ಪತ್ರೆಯೂ ಆಗಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ದಿನವೂ 800ಕ್ಕೂ ಹೆಚ್ಚಿನ ರೋಗಿಗಳು ಆಗಮಿಸುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಒಂದಲ್ಲ ಒಂದುಕಡೆ ವನ್ಯಜೀವಿ ದಾಳಿ, ಹಾವು ಕಡಿತ ಪಟ್ಟಣದ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಅಲ್ಲಲ್ಲಿ ಸಂಭವಿಸುವ ಅಪಘಾತಗಳಿಂದ ಆಸ್ಪತ್ರೆಯು ಸದಾ ಕಾಲ ಗಿಜಿಗುಡುತ್ತಿರುತ್ತದೆ. ಹೀಗಾಗಿ ವೈದ್ಯರು ಹಾಗೂ ಅರೋಗ್ಯ ಇಲಾಖೆಯ ಸಿಬ್ಬಂದಿ ಸದಾಕಾಲ ಒತ್ತಡದಲ್ಲಿಯೇ ಕೆಲಸ ಮಾಡುವಂತಾಗಿದೆ. ಇದರಿಂದ ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಪಟ್ಟಣದ ರೋಗಿಗಳು ಸಹಾ ವೈದ್ಯರಿಗಾಗಿ ಗಂಟೆಗಟ್ಟಲೇ ಕಾದು ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಸಣ್ಣಪುಟ್ಟ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುವ ರೋಗಿಗಳು ಪ್ರತಿ ತಿಂಗಳೂ ನಿಯಮಿತವಾಗಿ ಬಿಪಿ ತಪಾಸಣೆ ಹಾಗೂ ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯುವವರಿಗೆ ಅನುಕೂಲವಾಗುವಂತೆ ಸರ್ಕಾರ ನಮ್ಮ ಕ್ಲಿನಿಕ್ ಹೆಸರಿನಲ್ಲಿ ಆಯ್ದ ಬಡಾವಣೆಗಳಲ್ಲಿ ಕ್ಲಿನಿಕ್ ಆರಂಭಿಸುವ ಯೋಜನೆ ಕೈಗೆತ್ತಿಕೊಂಡಿದೆ. ಇದರಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಎರಡು ನಮ್ಮ ಕ್ಲಿನಿಕ್ ತೆರೆದಿದೆ. ಸದ್ಯ ಕಳೆದ ವರ್ಷ ಒಕ್ಕಲಗೇರಿಯಲ್ಲಿ ತೆರೆದಿರುವ ಕ್ಲಿನಿಕ್ ಆ ಭಾಗದ ಸಾರ್ವಜನಿಕರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುತ್ತಿದೆ. ಇದರಿಂದ ಈ ಭಾಗದ ಜನರು ಆಸ್ಪತ್ರೆಗೆ ತೆರಳಲು ಆಗುತ್ತಿದ್ದ ಶ್ರಮ, ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ. ಆದರೆ ಮಾರ್ಚ್ ಅಂತ್ಯದಲ್ಲಿ ಅಶ್ವಿನಿ ಬಡಾವಣೆಯ ಬಾಡಿಗೆ ಕಟ್ಟಡದಲ್ಲಿ ಆರಂಭಿಸಿದ ಕ್ಲಿನಿಕ್ ಅನ್ನು ಶಾಸಕ ಗಣೇಶ್ ಪ್ರಸಾದ್ ಉದ್ಘಾಟಿಸಿ, ಬಡಾವಣೆಯ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದರು. ಆದರೆ ವೈದ್ಯರು, ಸಿಬ್ಬಂದಿ ಇಲ್ಲದೆ ಕ್ಲಿನಿಕ್ ಸದಾ ಮುಚ್ಚಿರುವುದರಿಂದ ಶಾಸಕರ ಭರವಸೆ ನುಡಿ ಹುಸಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net