ಯುಪಿಎಸ್ಸಿ ಟಾಪರ್ ಡಾ.ನವೀನ್ ಭಟ್ ಉಡುಪಿ ಜಿಪಂ ಸಿಇಒ

naveen new
Published on

ಉಡುಪಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾವಣೆಗೊಳಿಸಿ, ಹಾಸನ ಉಪ ವಿಭಾಗ ಸಹಾಯಕ ಆಯುಕ್ತ ಡಾ.ನವೀನ್ ಭಟ್ ವೈ. ಅವರನ್ನು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ನಿವಾಸಿ 28 ವರ್ಷದ ನವೀನ್ ಭಟ್ 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‌್ಯಾಂಕ್ ಪಡೆದಿದ್ದರು. ಐಎಎಸ್ ಕರ್ನಾಟಕ ಕೇಡರ್ ಸೇವೆಗೆ ಆಯ್ಕೆಯಾಗಿ ಪ್ರೊಬೆಷನರಿ ತರಬೇತಿ ಮುಗಿಸಿದ್ದರು. ವೈದ್ಯರೂ ಆಗಿರುವ ಹಿನ್ನೆಲೆಯಲ್ಲಿ ಇವರಿಗೆ ದೆಹಲಿಯಲ್ಲಿ 3 ತಿಂಗಳು ಕೇಂದ್ರ ಆರೋಗ್ಯ ಇಲಾಖೆಗೆ ಸಂಬಂಧಿಸಿ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಯ ತರಬೇತಿ ನೀಡಲಾಗಿತ್ತು. ಬಳಿಕ ಹಾಸನ ಜಿಲ್ಲೆ ಉಪ ವಿಭಾಗ ಆಯುಕ್ತರಾಗಿ 10 ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.

ಬಂಟ್ವಾಳದ ಉಮೇಶ್ ಭಟ್ ಅವರ ಪುತ್ರರಾಗಿರುವ ನವೀನ್ ಭಟ್ ಬಂಟ್ವಾಳದಲ್ಲಿ ಪ್ರೌಢಶಾಲೆ, ವಿಟ್ಲದಲ್ಲಿ ಪಿಯುಸಿ ಶಿಕ್ಷಣ ಪಡೆದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಬಳಿಕ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದರು.

ಪ್ರೀತಿಗೆ ಹುದ್ದೆ ತೋರಿಸಿಲ್ಲ: ನಿರ್ಗಮನ ಸಿಇಒ ಪ್ರೀತಿ ಗೆಹ್ಲೋಟ್‌ಗೆ ಸರ್ಕಾರ ವರ್ಗಾವಣೆ ಆದೇಶದಲ್ಲಿ ಮುಂದಿನ ಹುದ್ದೆ ತೋರಿಸಿಲ್ಲ. 2019 ಸೆ.7ರಂದು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net