ಯುಪಿಎಸ್ಸಿಯಲ್ಲಿ ತುಮಕೂರು ಜಿಲ್ಲೆಯ ಇಬ್ಬರ ಸಾಧನೆ ; ಬಿ.ಸಿ.ಹರೀಶ್ 409, ಎಚ್.ಬಿ.ವಿವೇಕ್ 444ನೇ ರ‌್ಯಾಂಕ್

UPSC
Published on

ತುಮಕೂರು : ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಬಿ.ಸಿ.ಹರೀಶ್ (409), ಎಚ್.ಬಿ.ವಿವೇಕ್ (444) ಉತ್ತಮ ಸಾಧನೆ ಮಾಡಿದ್ದು, ಈ ಬಾರಿ ಹರೀಶ್ ಅವರ ಐಎಎಸ್ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಕಳೆದ ಬಾರಿ 657ನೇ ರ‌್ಯಾಂಕ್ ಗಳಿಸಿದ್ದ ತುಮಕೂರು ತಾಲೂಕು ಹೆಬ್ಬೂರು ಸಮೀಪದ ಬೈಚೇನಹಳ್ಳಿಯ ಬಿ.ಸಿ.ಹರೀಶ್ ಈ ಬಾರಿ 409ನೇ ರ‌್ಯಾಂಕ್ ಗಳಿಸಿದ್ದಾರೆ. ಸದ್ಯ ನಾಗಪುರದ ಐಆರ್‌ಎಸ್‌ಐಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹರೀಶ್ ಅವರದ್ದು 5ನೇ ಪ್ರಯತ್ನ ಇದು. ಈ ಬಾರಿ ಹೊಸದಾಗಿ ಆರ್ಥಿಕ ಹಿಂದುಳಿದ ವರ್ಗದ ಕೋಟಾದಡಿ ಐಎಎಸ್ ಕನಸು ನನಸು ಮಾಡಿಕೊಂಡಿದ್ದಾರೆ.

ಹರೀಶ್ 1 ರಿಂದ 7ನೇ ತರಗತಿವರೆಗೆ ಹೆಬ್ಬೂರಿನ ವಿಪ್ರ ವಿದ್ಯಾಮಂದಿರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ನಂತರ ವಿದ್ಯಾನಿಕೇತನ್ ಶಾಲೆಯಲ್ಲಿ ಪ್ರೌಢಶಾಲೆ ಮುಗಿಸಿದ್ದರು. ಸರ್ವೋದಯ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಸರ್‌ಎಂವಿಐಟಿ ಕಾಲೇಜಿನಲ್ಲಿ ಬಿಇ ಪದವಿ ಪಡೆದು ಕಾಗ್ನಿಸೆಂಟ್ ಐಟಿ ಕಂಪನಿಯಲ್ಲಿ 2011 ರಿಂದ 2013ರವರೆಗೆ ಕಾರ್ಯನಿರ್ವಹಿಸಿದ್ದರು. ಹರೀಶ್ ತಂದೆ ಜಿಪಂ ಮಾಜಿ ಸದಸ್ಯ ಚಿಕ್ಕವೆಂಕಟಯ್ಯ. ತಾಯಿ ಚಿಕ್ಕಮ್ಮ ಗೃಹಿಣಿ. ಈ ಬಾರಿ ಯುಪಿಎಸ್ಸಿಯಲ್ಲಿ ಇಡಬ್ಲೂೃಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಕೋಟಾದಡಿ ಪಡೆದಿರುವ ರ‌್ಯಾಂಕ್‌ಗೆ ಐಎಎಸ್ ಸೇವೆಗೆ ಆಯ್ಕೆಯಾಗಬಹುದೆಂಬ ನಿರೀಕ್ಷೆ ಹರೀಶ್ ಅವರದ್ದಾಗಿದೆ.

ಬಡತನ, ರೈತರ ಸಮಸ್ಯೆ ಬಲ್ಲೆ : ಬಡತನ, ರೈತ ಕುಟುಂಬ ಹಿನ್ನೆಲೆಯ ಎಚ್.ಬಿ.ವಿವೇಕ್ ಅಪ್ಪಟ ಗ್ರಾಮೀಣ ಪ್ರತಿಭೆ. ಕಳೆದ ಬಾರಿ 257ನೇ ರ‌್ಯಾಂಕ್ ಗಳಿಸಿದ್ದ ವಿವೇಕ್ ಈ ಬಾರಿ 444ನೇ ರ‌್ಯಾಂಕ್ ಗಳಿಸಿರುವರಾದರೂ ಆರ್ಥಿಕವಾಗಿ ಹಿಂದುಳಿದ ವರ್ಗದಡಿ ಐಪಿಎಸ್ ಸೇವೆಗೆ ಆಯ್ಕೆಯಾಗುವ ನಿರೀಕ್ಷೆ ಹೊಂದಿದ್ದಾರೆ.

2014ರಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಉದ್ಯೋಗ ಬಿಟ್ಟು ಯುಪಿಎಸ್ಸಿ ಕನಸು ಕಂಡಿದ್ದ ತಿಪಟೂರು ತಾಲೂಕು ಹುಚ್ಚಗೊಂಡನಹಳ್ಳಿಯ ಎಚ್.ಎಲ್.ಬಸವಲಿಂಗಯ್ಯ, ತಾಯಿ ಶಶಿಕಲಾ ಅವರ ಪುತ್ರ ವಿವೇಕ್‌ಗೆ 5ನೇ ಪ್ರಯತ್ನದಲ್ಲಿ 257 ರ‌್ಯಾಂಕ್‌ಗಳಿಸಿ ಸದ್ಯ ಐಆರ್‌ಎಸ್ ಕಸ್ಟಮ್ಸ್ ಆಯ್ಕೆಯಾಗಿದ್ದು ಫರಿದಾಬಾದ್‌ನಲ್ಲಿ ತರಬೇತಿಯಲ್ಲಿದ್ದರು. 6ನೇ ಪ್ರಯತ್ನದಲ್ಲಿ 444ನೇ ರ‌್ಯಾಂಕ್‌ಗಳಿಸಿದ್ದು ಇಡಬ್ಲೂೃಎಸ್ ಅಡಿ ಐಪಿಎಸ್ ಸೇವೆಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ಸತತ 6 ವರ್ಷಗಳ ಪರಿಶ್ರಮದ ಫಲ ಇದು. ಶಾಲಾ ಸಹಪಾಠಿಗಳು ವಿವೇಕ್ ಕೆಲಸ ಬಿಟ್ಟ ಮೇಲೆ ಯುಪಿಎಸ್‌ಸಿಗೆ ನೆರವಾಗಲೆಂದು ಪ್ರತೀ ತಿಂಗಳು 5 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತಿದ್ದರು. ಸಹೋದರಿ ಸುಕನ್ಯಾ ಒತ್ತಾಸೆಯಾಗಿದ್ದರು. ವಿವೇಕ್ ಜತೆ ವಿವಾಹ ನಿಶ್ಚಯವಾಗಿರುವ ಶೃತಿ ಅವರೂ ಬೆಂಬಲವಾಗಿ ನಿಂತಿದ್ದರು. ಬಡತನ, ರೈತ ಕುಟುಂಬದಿಂದ ಬಂದಿರುವ ವಿವೇಕ್‌ಗೆ ಹಸಿವು, ಬಡತನದ ಬೇಗೆ ಗೊತ್ತಿದೆ. ಐಪಿಎಸ್ ನನ್ನ ಕನಸಾಗಿತ್ತು. ಪೊಲೀಸ್ ಇಲಾಖೆ ಸೇರಿದ ಬಳಿಕ ಕಾನೂನು ವ್ಯವಸ್ಥೆ ಕಾಪಾಡುವುದಲ್ಲದೆ, ಬಡವರಿಗೆ ನ್ಯಾಯ ಒದಗಿಸಲು ಪ್ರಾಯಾಣಿಕ ಪ್ರಯತ್ನ ಮಾಡುತ್ತೇನೆ ಎಂದರು ವಿವೇಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net