

ಮಂಡ್ಯ: ವಿವಿಧ ವಸತಿ ಶಾಲೆಗಳ 6ನೇ ತರಗತಿ ಮತ್ತು ಯುಪಿಎಸ್ಸಿ, ಕೆಪಿಎಸ್ಸಿ ತರಬೇತಿ ಪ್ರವೇಶ ಪರೀಕ್ಷೆ ಫೆ.18ರಂದು 17 ಜಿಲ್ಲೆಯ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ವ, ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕೆ 1 ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ, ಪತ್ರಿಕೆ 2 ಮಧ್ಯಾಹ್ನ 2.30 ರಿಂದ 4.30 ರವರೆಗೆ ಪರೀಕ್ಷೆ ನಡೆಯಲಿದೆ. 4654 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಯುಪಿಎಸ್ಸಿ, ಕೆಪಿಎಸ್ಸಿ, ಗ್ರೂಪ್ ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್, ಆರ್‌ಆರ್‌ಬಿ ಪರೀಕ್ಷೆಗಳಿಗೆ ತರಬೇತಿ ನೀಡುವ ಪ್ರವೇಶ ಪರೀಕ್ಷೆ ನಡೆಯಲಿದೆ. ಯುಪಿಎಸ್ಸಿ, ಕೆಪಿಎಸ್ಸಿ ತರಬೇತಿ ಪ್ರವೇಶ ಪರೀಕ್ಷೆಯು 2 ಕೇಂದ್ರಗಳಲ್ಲಿ ನಡೆಯಲಿದ್ದು, ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು 2.30 ರಿಂದ ಸಂಜೆ 4.30ರವರೆಗೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. 1,336 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲುಕುಲೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್ ಸೆಟ್ಸ್ ಇತ್ಯಾದಿ ತರುವುದನ್ನು ನಿಷೇದಿಸಲಾಗಿದೆ. ಪರೀಕ್ಷಾರ್ಥಿಗಳು ತಮಗೆ ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ಪರೀಕ್ಷಾರ್ಥಿಗಳು ತಮಗೆ ಪ್ರವೇಶ ಪತ್ರದಲ್ಲಿ ತಿಳಿಸಿರುವ ರೀತಿ ವಸ್ತ್ರಸಂಹಿತೆ ಪಾಲಿಸಬೇಕು. ಪ್ರವೇಶ ಪರೀಕ್ಷೆಯನ್ನು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಸಿ ಯಾವುದೇ ಅಕ್ರಮ ಚಟುವಟಿಕೆಗೆ ಆಸ್ಪದ ನೀಡದೆ ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗೆ ತ್ರಿಸದಸ್ಯರನ್ನೊಳಗೊಂಡ 6 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ವೀಕ್ಷಕರು ಹಾಗೂ ಪರೀಕ್ಷೆಗೆ ನಿಯೋಜಿಸಲಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಪರೀಕ್ಷಾ ಪ್ರಾಧಿಕಾರ ಕಾಲ ಕಾಲಕ್ಕೆ ನೀಡಲಾಗುವ ಸಲಹೆ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಸಭೆಯಲ್ಲಿ ಡಿಡಿಪಿಯು ಚಲುವಯ್ಯ, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಚಂದ್ರಕಾಂತಾ, ಡಿಸಿ ಕಚೇರಿಯ ಕೇಂದ್ರ ಸ್ಥಾನಿಕ ಸಹಾಯಕಿ ಡಾ.ರೋಹಿಣಿ ಇತರರಿದ್ದರು.