

ಹುಬ್ಬಳ್ಳಿ: ಬೆಂಗಳೂರಿನ ವಾಸವಿ ಅಕಾಡೆಮಿ ಹಾಗೂ ಎಬಿಎಸ್ಎಸ್ ಕೆ ವಿದ್ಯಾವರ್ಧಕ ಸಂಘದ ಶ್ರೀ ಖೋಡೆ ಲಕ್ಷ್ಮಣಸಾ ಹಾಸ್ಟೆಲ್ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಯುಪಿಎಸ್ಸಿ ಉಚಿತ ತರಬೇತಿ ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸಮಾಜದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತಜ್ಞರ ಸಲಹೆ, ಮಾರ್ಗದರ್ಶನ ಪಡೆದರು.
ಸಮಾಜದ ಮುಖಂಡ ಟಿ.ಎಂ. ಮೆಹರವಾಡೆ ಪ್ರಾಸ್ತಾವಿಕ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತರಬೇತಿ ಪಡೆದು ಯಶಸ್ಸು ಸಾಧಿಸಬೇಕು. ಸಮಾಜ ನಿಮ್ಮೊಂದಿಗೆ ಇದೆ ಎಂದರು.
ವಾಸವಿ ಅಕಾಡೆಮಿ ಸಲಹಾ ಸಮಿತಿ ಸದಸ್ಯರಾದ ಮಹೇಶ ಬಿ, ಡಾ. ಟಿ.ಜಿ. ಜನಾರ್ದನ, ಮೆರಿಟ್ಯುಡ್ ಸ್ಕಿಲ್ ಡೆವಲಪಮೆಂಟ್ ಲಿಮಿಟೆಡ್ ಮುಖ್ಯ ಮಾರ್ಗದರ್ಶಕ ಇಲ್ಲೂರ ಮೋಹನರಾಜ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಹಲವು ವಿಷಯಗಳ ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆ, ಪೂರ್ವ ತಯಾರಿಯ ವಿಧಾನಗಳ ಬಗ್ಗೆ ತಿಳಿಸಿ ಕೊಟ್ಟರು.
ಮಹಾರಾಷ್ಟ್ರದ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತ ವಿಶಾಲ ಮಕವಾನೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹಲವು ಸಲಹೆಗಳನ್ನು ನೀಡಿದರು. ವಿಶಾಲಾಕ್ಷಿ ಆಕಳವಾಡಿ ಅವರು ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸುವ ಕುರಿತು ಮಾಹಿತಿ ನೀಡಿದರು.
ಎಬಿಎಸ್ಎಸ್ ಕೆ ಅಧ್ಯಕ್ಷ ಶ್ರೀನಿವಾಸ ಖೋಡೆ ಅಧ್ಯಕ್ಷತೆ ವಹಿಸಿದ್ದರು. ಮೀರಾ ಮೆಹರವಾಡೆ, ಸತ್ಯನಾರಾಯಣ, ಶಾಮ ಕಬಾಡೆ ಇತರರು ಉಪಸ್ಥಿತರಿದ್ದರು.
ಚಂದ್ರಿಕಾ ದೇವಿಕಾ ಪ್ರಾರ್ಥನೆ ಹಾಡಿದರು. ಎಂ.ಆರ್. ಸೋಳಂಕಿ ಸ್ವಾಗತಿಸಿದರು. ಪುಷ್ಪಾ ಪರಿಚಯಿಸಿದರು. ಮಾಜಿ ಮೇಯರ್ ಸರಳಾ ಭಾಂಡಗೆ, ಅಕ್ಷತಾ ಭಾಂಡಗೆ ಕಾರ್ಯಕ್ರಮ ನಿರ್ವಹಿಸಿದರು.