

ಮೈಸೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸುವ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ಸಾಧನೆ ತೋರಿದ್ದಾರೆ. ಈ ಪೈಕಿ ಇಬ್ಬರು ಇಂಜಿನಿಯರ್ ಹಾಗೂ ಒಬ್ಬರು ವೈದ್ಯರಾಗಿದ್ದಾರೆ.
ಇಂಜಿನಿಯರ್‌ಗಳಾದ ವಿಜಯನಗರ 3ನೇ ಹಂತದ ಕೆ. ಸೌರಭ್ 260ನೇ ರ‌್ಯಾಂಕ್, ಕುವೆಂಪುನಗರದ ಎಂ. ಪೂಜಾ 390ನೇ ರ‌್ಯಾಂಕ್ ಹಾಗೂ ವೈದ್ಯರಾದ ಬೆಳವಾಡಿಯ ಜೆ. ಭಾನುಪ್ರಕಾಶ್ 448ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಎಂ. ಪೂಜಾ ಎರಡನೇ, ಭಾನುಪ್ರಕಾಶ್ ಮೂರನೇ ಹಾಗೂ ಸೌರಭ್ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಕುವೆಂಪುನಗರದ ನಿವಾಸಿ, ಖಾಸಗಿ ಸಂಸ್ಥೆ ಉದ್ಯೋಗಿಯಾಗಿರುವ ಮುಕುಂದ್‌ರಾವ್-ರೋಹಿಣಿ ದಂಪತಿ ಪುತ್ರಿಯಾದ ಪೂಜಾ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರೂ ಅವರನ್ನು ಅಕರ್ಷಿಸಿದ್ದು ನಾಗರಿಕ ಸೇವೆ. ಎರಡನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಗೆ ಪೂಜಾ ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯಲಿಲ್ಲ, ಮನೆಯಲ್ಲಿ ಕುಳಿತು ಓದಿಯೇ ಯಶಸ್ಸನ್ನು ಕಂಡಿದ್ದಾರೆ. ‘ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಎಲ್ಲ ರೀತಿಯ ಸವಲತ್ತುಗಳು ಅವಶ್ಯಕ ಎಂಬ ಭಾವನೆ ಬೇಡ, ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಿದೆ’ ಅನ್ನುತ್ತಾರೆ ಪೂಜಾ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 2 ವರ್ಷಗಳ ಪ್ರಯತ್ನ ಪಟ್ಟೆ, ಅದು ಇಂದು ಫಲ ನೀಡಿದೆ. ತಾಯಿಯ ಆಸೆಯಂತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ತಂದೆ, ತಾಯಿ ಹಾಗೂ ತಂಗಿ ಸೇರಿ ಕುಟುಂಬದವರ ಸಹಕಾರದಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಯಿತು.
ನಗರದ ಯುವಕ ಕೆ. ಸೌರಭ್ ಇಂಡಿಯನ್ ಫಾರೆಸ್ಟ್ ಸರ್ವೀಸ್ (ಐಎಫ್‌ಎಸ್)ನಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಡೆಹರಾಡೂನ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯ ಅವಧಿಯಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ 260ನೇ ರ‌್ಯಾಂಕ್ ಪಡೆದು ಕೊಂಡಿರುವುದು ವಿಶೇಷ.
ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆಂಪರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಎಂ. ಜಾನಕಿ ದಂಪತಿಯ ಪುತ್ರರಾಗಿರುವ ಸೌರಭ್ ಎಂಟೆಕ್ ಪದವೀಧರ. ಇಂಜಿನಿಯರಿಂಗ್ ಶಿಕ್ಷಣ ಪಡೆದರೂ ನಾಗರಿಕ ಸೇವೆ ಅವರನ್ನು ಆಕರ್ಷಿಸಿತು.
‘ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಸಂದರ್ಭ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡೆ. ಅದಾದ ನಂತರ ಮನೆಯಲ್ಲಿಯೇ ಓದಿಕೊಂಡು ಉತ್ತೀರ್ಣನಾದೆ. ತಂದೆ, ತಾಯಿಯ ಸ್ಫೂರ್ತಿಯಿಂದ 4ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಗೆ ಸಾಕಷ್ಟು ಓದಿಕೊಂಡರೂ ನಿರಂತರವಾಗಿ ಓದಲಿಲ್ಲ. ಎರಡು ಗಂಟೆ ಓದಿದರೆ ಇನ್ನೆರಡು ಗಂಟೆಯನ್ನು ಟಿವಿ ನೋಡುವುದು ಹಾಗೂ ಆಟ ಆಡುವುದರಲ್ಲಿ ಕಳೆಯುತ್ತಿದ್ದೆ. ನಿರಂತರವಾಗಿ ಓದಿದರೆ ತಲೆಯಲ್ಲಿ ಉಳಿಯುವುದಿಲ್ಲ ಎಂಬ ತಂದೆಯವರ ಸಲಹೆಯನ್ನು ಪಾಲಿಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ’ ಎನ್ನುತ್ತಾರೆ ಸೌರಭ್.
ನಗರದ ಹೊರವಲಯದ ಬೆಳವಾಡಿಯ ನಿವಾಸಿ ಜೆ. ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರು. ನೆಲಮಂಗಲದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯ ವೃತ್ತಿಯ ಒತ್ತಡದ ನಡುವೆಯೂ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಸಿ ನಡೆಸಿ 3ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಇವರು ಕೆ.ಆರ್. ನಗರದ ಕೆಸ್ತೂರುಕೊಪ್ಪಲು ನಿವಾಸಿಯಾದ ಕೃಷಿಕ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರರಾಗಿದ್ದಾರೆ.
‘ಪ್ರಾರಂಭದಲ್ಲಿ ನಾಗರಿಕ ಸೇವೆ ನನ್ನ ಆಸಕ್ತಿಯ ವಿಷಯ ಆಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಸೇವೆಯ ಕಡೆಗೆ ಆಕರ್ಷಣೆ ಹೆಚ್ಚಾಯಿತು. ಹಾಗಾಗಿ ವೈದ್ಯ ವೃತ್ತಿಯ ನಡುವೆಯೂ ಯುಪಿಎಸ್‌ಇ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದೆ. 3ನೇ ಪ್ರಯತ್ನದಲ್ಲಿ 448ನೇ ರ‌್ಯಾಂಕ್‌ನೊಂದಿಗೆ ತೇರ್ಗಡೆಯಾಗಿರುವುದು ಸಂತಸ ಉಂಟು ಮಾಡಿದೆ’ ಎಂದು ಭಾನುಪ್ರಕಾಶ್ ಹರ್ಷ ವ್ಯಕ್ತಪಡಿಸಿದರು.