ಯುಪಿಎಸ್‌ಸಿ ಪರೀಕ್ಷೆ : ಮೈಸೂರಿನ ನಾಲ್ವರ ಸಾಧನೆ

UPSC union public service commission
Published on

ಮೈಸೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸುವ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ನಾಲ್ವರು ಸಾಧನೆ ತೋರಿದ್ದಾರೆ. ವೃತ್ತಿಯಲ್ಲಿ ವೈದ್ಯರು, ಇಂಜಿನಿಯರ್ ಹಾಗೂ ದೃಷ್ಟಿವಿಶೇಷಚೇತನ ಯುವತಿ, ಗೃಹಿಣಿ ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಯನ್ನು ತೋರಿದ್ದಾರೆ.

ಹುಣಸೂರು ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಲಾಪುರ ಗ್ರಾಮದ ನಿವಾಸಿಯಾದ ಎಲ್. ಮಹದೇವ ಮತ್ತು ಕೆ.ಟಿ. ಶೈಲಜಾ ದಂಪತಿ ಪುತ್ರ ಎಂ. ಲೇಖನ್ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 777ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರಿಂಗ್ ಹುದ್ದೆಗೆ 2023ರಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದರು. ಈ ನಡುವೆ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ ತೇರ್ಗಡೆ ಹೊಂದಿದ್ದಾರೆ.

ಲೇಖನ್
ಲೇಖನ್

ಲೇಖನ್ ಅಪ್ಪಟ್ಟ ಗ್ರಾಮೀಣ ಪ್ರತಿಭೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಲೇಖನ್ ನಂತರ ತಂದೆಯ ಸಲಹೆಯ ಮೇರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರಾರಂಭಿಸಿದ್ದರು. ವೃತ್ತಿಯಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಮಹದೇವ ಅವರೇ ಲೇಖನ್ ಅವರಿಗೆ ಸ್ಫೂರ್ತಿ.

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತಿಯೊಬ್ಬರು ತರಬೇತಿ ಪಡೆದುಕೊಳ್ಳುತ್ತಾರೆ. ಆದರೆ, ಲೇಖನ್ ಮನೆಯಲ್ಲಿದ್ದುಕೊಂಡೇ ಯಾವುದೇ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಳ್ಳದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ವಿಶೇಷ. ಪ್ರತಿನಿತ್ಯ ಆರು ಗಂಟೆಗಳ ಕಾಲ ಓದಿಗೆ ಮೀಸಲಿಟ್ಟಿದ್ದರು. ಯೂಟ್ಯೂಬ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ತಪ್ಪದೆ ನೋಡಿ ಅದರಿಂದ ಒಂದಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ನಿರಂತರ ಪರಿಶ್ರಮಕ್ಕೆ ಕಡೆಗೂ ಲೇಖನ್ ಅವರಿಗೆ ಯಶಸ್ಸು ದೊರೆತ್ತಿದೆ.

ಕೆ.ಆರ್. ನಗರದ ಕೆಸ್ತೂರುಕೊಪ್ಪಲು ನಿವಾಸಿಯಾದ ಕೃಷಿಕ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರರಾದ ಜೆ. ಭಾನುಪ್ರಕಾಶ್ 4ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 600ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಕಳೆದ ಬಾರಿ ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 448ನೇ ರ‌್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಪ್ರಸ್ತುತ ತರಬೇತಿಯಲ್ಲಿ ಇದ್ದಾರೆ. ಮತ್ತಷ್ಟು ಉತ್ತಮ ರ‌್ಯಾಂಕ್ ಪಡೆಯುವ ಸಲುವಾಗಿ ಭಾನುಪ್ರಕಾಶ್ 4ನೇ ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿದ್ದರು. ಆದರೆ, ಈ ಬಾರಿ ಅವರಿಗೆ ಕಳೆದ ಬಾರಿಗಿಂತ ಕಡಿಮೆ ರ‌್ಯಾಂಕ್ ದೊರೆತ್ತಿದೆ.

ಭಾನುಪ್ರಕಾಶ್
ಭಾನುಪ್ರಕಾಶ್

ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರು. ಮಂಡ್ಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಬಿಬಿಎಸ್, ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆದರು. ಆ ನಂತರ 2019ರಿಂದ ನೆಲಮಂಗಲದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ವೈದ್ಯ ವೃತ್ತಿಯ ಒತ್ತಡದ ನಡುವೆಯೂ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಸಿ ನಡೆಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರತಿನಿತ್ಯ 5 ರಿಂದ 6 ಗಂಟೆ ಓದಿಗೆ ಮೀಸಲಿಡುತ್ತಿದ್ದರು. ಇವರಿಗೆ ಯುಪಿಎಸ್ ಪರೀಕ್ಷೆ ಎದುರಿಸಲು ಇವರಿಗೆ ತಾಯಿಯೇ ಸ್ಫೂರ್ತಿ. ತಾಯಿಯ ಸ್ಫೂರ್ತಿಯ ಮಾತುಗಳಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ.

ದೃಷ್ಟಿವಿಶೇಷಚೇತನ ಮೇಘನಾ ಅದ್ಭುತ ಸಾಧನೆ

ದೃಷ್ಟಿದೋಷವುಳ್ಳ ಯುವತಿಯೊಬ್ಬರು ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೂರನೇ ಪ್ರಯತ್ನದಲ್ಲಿ 721ನೇ ರ‌್ಯಾಂಕ್ ಪಡೆದು ಸಾಧನೆ ತೋರಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ತಾಂಡವಮೂರ್ತಿ-ನವನೀತಾ ದಂಪತಿ ಪುತ್ರಿಯಾದ ಕೆ.ಟಿ. ಮೇಘನಾ ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ದಾರೆ.

ಮೇಘನಾ
ಮೇಘನಾ

ಮೇಘನಾ ಅವರು 10ನೇ ತರಗತಿ ಓದುವಾಗ ರೆಟಿನಾ ಸಮಸ್ಯೆ ಯಿಂದ ಶೇ.70 ರಷ್ಟು ದೃಷ್ಟಿ ಕಳೆದುಕೊಂಡರು. ದೃಷ್ಟಿ ಸಮಸ್ಯೆಯ ನಡುವೆಯೂ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರುವ ಕನಸು ಮಾತ್ರ ಬಿಡಲಿಲ್ಲ. 2020ನೇ ಸಾಲಿನ ಹಮ್ಮಿಕೊಂಡಿದ್ದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 465ನೇ ರ‌್ಯಾಂಕ್, 2021ನೇ ಸಾಲಿನಲ್ಲಿ 425ನೇ ರ‌್ಯಾಂಕ್ ಪಡೆದುಕೊಂಡಿದ್ದರು. ಪ್ರಸ್ತುತ ಇವರು ಭಾರತೀಯ ಮಾಹಿತಿ ಸೇವೆಯಲ್ಲಿ ಅಧಿಕಾರಿಯಾಗಿ ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಜ್ಞಾನಬೋಧಿನಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ಮೇಘನಾ ಜೈನ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ನಂತರ ಸುರಾನಾ ಕಾಲೇಜಿನಲ್ಲಿ ಪದವಿ, ದೂರಶಿಕ್ಷಣದಲ್ಲಿ ಎಂಎ ಇಂಗ್ಲಿಷ್ ಪದವಿ ಪಡೆದಿದರು.


ಬಾಲ್ಯದಿಂದಲೂ ಐಎಎಸ್ ಅಧಿಕಾರಿ ಆಗಬೇಕು ಎಂಬುದು ಅವರ ಕನಸಾಗಿತ್ತು. ಇವರ ಕನಸಿಗೆ ಪಾಲಕರು ಪ್ರೋತ್ಸಾಹ ನೀಡುವ ಕಾರ್ಯ ಮಾಡಿದರು. ಕಳೆದ ಬಾರಿಗಿಂತ ಉತ್ತಮ ರ‌್ಯಾಂಕಿಂಗ್ ಪಡೆಯಲು ಮೇಘನಾ ಪರೀಕ್ಷೆ ಎದುರಿಸಿದರೂ ಈ ಬಾರಿ ಅವರು ನಿರೀಕ್ಷೆ ಮಾಡಿದಷ್ಟು ಉತ್ತಮ ರ‌್ಯಾಂಕ್ ದೊರೆಯಲಿಲ್ಲ.

ಗೃಹಿಣಿಯ ಸಾಧನೆ

ಎಚ್.ಡಿ. ಕೋಟೆ ತಾಲೂಕಿನ ಆಲನಹಳ್ಳಿಯ ಯೋಗೇಶ್ ಪತ್ನಿ, ಹುಣಸೂರು ತಾಲೂಕಿನ ಗೆಜ್ಜಯ್ಯನ ವಡ್ಡರಗುಡಿಯ ಕೃಷಿಕ ನಂಜಪ್ಪ ಹಾಗೂ ಸುಂದರಮ್ಮ ದಂಪತಿ ಪುತ್ರಿ ತೇಜಸ್ವಿನಿ ಮೂರನೇ ಪ್ರಯತ್ನದಲ್ಲಿ 787ನೇ ರ‌್ಯಾಂಕ್ ಪಡೆದಿದ್ದಾರೆ.

ತೇಜಸ್ವಿನಿ
ತೇಜಸ್ವಿನಿ

ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂಸಿಎ) ಪದವೀಧರರಾದ ತೇಜಸ್ವಿನಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿನಿಂದ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ. ಪ್ರಸ್ತುತ ದೊರೆತ್ತಿರುವ ರ‌್ಯಾಂಕ್‌ನಲ್ಲಿ ಐಆರ್‌ಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ. ನನಗೆ ಪರೀಕ್ಷೆ ಬರೆಯಲು ಇನ್ನೂ ಎರಡು ಅವಕಾಶವಿದ್ದು, ಮುಂದೆ ಮತ್ತಷ್ಟು ಉತ್ತಮ ರ‌್ಯಾಂಕ್ ಪಡೆಯುವ ವಿಶ್ವಾಸವನ್ನು ತೇಜಸ್ವಿನಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net