

ಬೆಳಗಾವಿ: ಕುರಿಗಾಹಿ ಯುವಕನೊರ್ವ ತನ್ನ ನಿರಂತರ ಶ್ರಮದಿಂದ ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ತನ್ನ ಹೆತ್ತವರಿಗೂ ಹಾಗೂ ಊರಿಗೂ ಕೀರ್ತಿ ತಂದಿದ್ದಾನೆ. ಮತ್ತೊಂದೆಡೆ ಮಗ ಯುಪಿಎಸ್ ಪರೀಕ್ಷೆಯಲ್ಲಿ ಪಾಸಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾರ ಹಾಕಿ, ಆರತಿ ಬೆಳಗಿ ಸಂಭ್ರಮಿಸಿದರು.
ಮೂಲತಃ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಎಮಗೆ ಗ್ರಾಮದ ಯುವಕ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್ ಪರೀಕ್ಷೆಯಲ್ಲಿ 551 ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಸದ್ಯ ಬೆಳಗಾವಿಯ ನಾನಾವಾಡಿಯಲ್ಲಿರುವ ತಮ್ಮ ಕುಟುಂಬದ ಜತೆ ಕುರಿ ಕಾಯುತ್ತಿದ್ದು, ಬೀರಪ್ಪ ಯುಪಿಎಸ್ ಪರೀಕ್ಷೆಯಲ್ಲಿ ಪಾಸಾಗಿರುವುದನ್ನು ತಿಳಿದು ಕುಟುಂಬಸ್ಥರು, ಸಂಬಂಧಿಕರು, ಸುತ್ತಮುತ್ತಲಿನ ರೈತರು ಸಿಹಿ ಹಂಚಿ ಸಂಭ್ರಮಿಸಿದರು.
ಸದ್ಯ ಕುರಿ ಹಿಂಡಿನಲ್ಲಿಯೇ ಇರುವ ಈತ ಮುಂದೆ ದೇಶದಲ್ಲಿ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾನೆ. ಸಿದ್ದಪ್ಪ ಹಾಗೂ ಬಾಳವ್ವ ದಂಪತಿಯ ಮೂರನೇ ಮಗನಾಗಿ ಜನಿಸಿದ ಬೀರಪ್ಪ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತನ್ನೂರು ಎಮಗೆಯಲ್ಲಿ ಮುಗಿಸಿ ನಂತರ ಪಿಯು ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿ ನಂತರ ಬಿಟೆಕ್ ಪದವಿ ಪಡೆದಿದ್ದಾನೆ. ಅಲ್ಲದೇ ಈತನ ಪ್ರತಿಭೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಯುಪಿಎಸ್ ಪರೀಕ್ಷೆ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಐಎಎಸ್ ಸಿದ್ಧತೆ ನಡೆಸಿದ್ದನು. 2021ರಿಂದ ಯುಪಿಎಸ್ಸಿ ಪರೀಕ್ಷೆ ಓದಲು ಆರಂಭ ಮಾಡಿದ್ದನು. ಸತತ ಪರಿಶ್ರಮದಿಂದ ಇದೀಗ 551ನೇ ರ‌್ಯಾಂಕ್ ಪಡೆದುಕೊಂಡಿದ್ದಾನೆ.
ಮಗ ಸೈನ್ಯದಲ್ಲಿ ಕೆಲಸ ಮಾಡಬೇಕು ಎಂಬ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಮೊದಲ ಮಗ ಸೈನ್ಯಕ್ಕೆ ಸೇರಿ ತಂದೆಯ ಆಸೆ ಈಡೇರಿಸಿದ್ದಾನೆ. ಸದ್ಯ ಯುಪಿಎಸ್ಸಿಯಲ್ಲಿ ಮೂರನೇ ಪ್ರಯತ್ನಕ್ಕೆ ತೇರ್ಗಡೆ ಹೊಂದಿರುವ ಬೀರಪ್ಪ ಮೊದಲ ಪ್ರಯತ್ನದಲ್ಲಿ ಮೂವತ್ತು ಹಾಗೂ ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕದಲ್ಲಿ ಹಿಂದೆ ಬಿದ್ದಿದ್ದನು.
ಐಎಎಸ್, ಐಪಿಎಸ್ ಆಗಬೇಕು ಎಂಬ ಏಕೈಕ ಉದ್ದೇಶದಿಂದ 2001ರಿಂದ ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ಆರಂಭಿಸಿದೆ. ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದೇನೆ. ಐಪಿಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದೆ. ದೃಢ ಸಂಕಲ್ಪ, ನಿರಂತರ ಓದು ಯಾವತ್ತು ಕೈಬಿಡುವುದಿಲ್ಲ ಎಂಬುವುದಕ್ಕೆ ನಾನೇ ಸಾಕ್ಷಿ. - ಬೀರಪ್ಪ ಸಿದ್ದಪ್ಪ ಡೋಣಿ, ಯುಪಿಎಸ್ ಪರೀಕ್ಷೆ 551ನೇ ರ‌್ಯಾಂಕ್ ವಿಜೇತ