ಸಾಮಾಜಿಕ ಭದ್ರತೆಗೆ ವಿರುದ್ಧವಾಗಿದೆ ಯುಪಿಎಸ್

postal
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯು ಸಾಮಾಜಿಕ ಭದ್ರತೆಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಅಂಚೆ ನೌಕರರ ಸಂಘ (ಎಐಪಿಇಯು)ದ ಮಾಜಿ ಮಹಾ ಕಾರ್ಯದರ್ಶಿ ಕೆ. ವಿ. ಶ್ರೀಧರನ್ ಹೇಳಿದರು.

ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಎಐಪಿಇಯು ಹುಬ್ಬಳ್ಳಿ ಶಾಖೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ಮತ್ತು ಯುಪಿಎಸ್ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಒಪಿಎಸ್ (ಹಳೇ ಪಿಂಚಣಿ ಯೋಜನೆ) ಈಗಲೂ ನಮ್ಮ ಆಯ್ಕೆಯಾಗಿದೆ. ಎನ್​ಪಿಎಸ್ ಮತ್ತು ಯುಪಿಎಸ್ ನಡುವೆ ಆಯ್ಕೆಗೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರವು ನೌಕರರನ್ನು ಇಬ್ಭಾಗಿಸುವ ಕುತಂತ್ರ ಮಾಡಿದೆ. ಎನ್​ಪಿಎಸ್​ನಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಿ ಯುಪಿಎಸ್ ಜಾರಿಗೆ ತರಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಐಪಿಇಯು ರಾಜ್ಯ ಕಾರ್ಯದರ್ಶಿ ಗೋವಿಂದ ಜಾನಕಿರಾಮ್ ಮಾತನಾಡಿ, ಯುಪಿಎಸ್​ನಲ್ಲಿ ಸಾಕಷ್ಟು ನ್ಯೂನತೆಗಳಿವೆ. ಎನ್​ಪಿಎಸ್-ಯುಪಿಎಸ್ ನಲ್ಲಿ ಆಯ್ಕೆ ಮಾಡಿಕೊಳ್ಳಲು ನೌಕರರಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಒಪಿಎಸ್ ಬೇಕೆಂಬ ಬೇಡಿಕೆಯಿಂದ ನಾವು ಈಗಲೂ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಗ್ರಾಮೀಣ ಡಾಕ್ ಸೇವಕ (ಜಿಡಿಎಸ್)ರು ಪೋಸ್ಟ್ ಮ್ಯಾನ್ ಆಗಲು ಎಐಪಿಇಯು ಕಾರಣ. ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟ್ ಮ್ಯಾನ್ ನೇಮಕಾತಿ ಪರೀಕ್ಷೆ ನಡೆದಿದ್ದು ನಮ್ಮ ಪ್ರಯತ್ನದಿಂದ. ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಮಾಡಿ ರೈಲ್ ಮೇಲ್ ಸರ್ವಿಸ್​ನಲ್ಲಿ ಕೊರತೆ ಇದ್ದ 90 ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗೆ ಪೋಸ್ಟ್ ಮ್ಯಾನ್​ಗಳನ್ನು ನೇಮಕ ಮಾಡಿಕೊಂಡಿದ್ದು ಕರ್ನಾಟಕವೇ ಮೊದಲು. ನಂತರ ಉಳಿದ ರಾಜ್ಯಗಳು ಇದನ್ನು ಅನುಸರಿಸಿವೆ. ಈ ಬದಲಾವಣೆಗಳನ್ನು ನಾವು ತಂದಿದ್ದೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ರವಿ ಪಾಟೀಲ, ಸಹ ಕಾರ್ಯದರ್ಶಿಗಳಾದ ಧಮೇಂದ್ರ ಜ್ಯಾಯಿ ಹಾಗೂ ಮಲ್ಲಪ್ಪ ನರಗುಂದ, ಹುಬ್ಬಳ್ಳಿ ಶಾಖೆ ಕಾರ್ಯದರ್ಶಿ ರುದ್ರಗೌಡ ಕುರಹಟ್ಟಿ, ರಾಘವೇಂದ್ರ ಹರಳೆ, ಎ.ಎನ್. ದೇಸಾಯಿ, ಇತರರು ಇದ್ದರು. ಸೌಮ್ಯ ಹರ್ಲಾಪುರ ಪ್ರಾರ್ಥನೆ ಹಾಡಿದರು. ಎಂ.ವಿ. ಮಹೇಂದ್ರಕರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net