ಆಯವ್ಯಯ ಪೂರ್ವಭಾವಿ ಸಭೆಯಲ್ಲೇ ಗದ್ದಲ

ಆಯವ್ಯಯ ಪೂರ್ವಭಾವಿ ಸಭೆಯಲ್ಲೇ ಗದ್ದಲ
Published on

ಹೊಸಕೋಟೆಯಲ್ಲಿ ಅಧಿಕಾರಿಗಳು, ಆಡಳಿತ ಪಕ್ಷದ ಸದಸ್ಯರ ನಡುವೆ ಸಮನ್ವಯತೆ ಕೊರತೆ

ಹೊಸಕೋಟೆ: ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಆಶಾ ರಾಜ್‌ಶೇಖರ್ ಅಧ್ಯಕ್ಷತೆಯಲ್ಲಿ ಮಂಗಳವಾರ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಯಿತು.

ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಸಮನ್ವಯತೆಯ ಕೊರತೆ ಒಂದೆಡೆಯಾದರೆ, ಸಭೆಗೆ ಇತರ ಇಲಾಖೆ ಅಧಿಕಾರಿಗಳನ್ನು ಕರೆಯಬೇಕಿತ್ತು. ಜತೆಗೆ ನಗರದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಶಾಸಕರು, ಸಂಘಟನೆ ಮುಖ್ಯಸ್ಥರು, ರಾಜಕೀಯ ಮುಖಂಡರು ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಕರೆಸಬೇಕಿತ್ತು ಎಂದು ಆಡಳಿತ ಪಕ್ಷದ ಸದಸ್ಯರು ಅಧಿಕಾರಿಗಳ ವಿರುದ್ಧ ಗುಡುಗಿದರು.

ನಗರಸಭೆಗೆ 2 ವರ್ಷಗಳ ಹಿಂದೆ ನಗರೋತ್ಥಾನದಲ್ಲಿ 60 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು, ಕಾಮಗಾರಿಗಳು ಪೂರ್ಣಗೊಂಡಿದ್ದು ಇಂದಿಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ನಗರಸಭೆ ಸದಸ್ಯ ಗುಲ್ಜಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಇಂಜಿನಿಯರ್ ಗಂಗಿರೆಡ್ಡಿ, ನಗರಸಭೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ, ಇದು ರಾಜ್ಯದಲ್ಲಿ ಎಲ್ಲ ನಗರಸಭೆಗಳ ಸಮಸ್ಯೆಯಾಗಿದೆ ಎಂದರು.

ನಗರದಲ್ಲಿ 20 ಸಾವಿರ ಮನೆಗಳಿದ್ದು, ಇಂದಿಗೂ ಕೇವಲ 5 ಸಾವಿರ ನಳ ಸಂಪರ್ಕ ಎಂದು ತೋರಿಸಿ ಅದಕ್ಕೆ ತೆರಿಗೆ ವಿಧಿಸಲಾಗುತ್ತಿದೆ. ಎಲ್ಲ ನಲ್ಲಿ ಸಂಪರ್ಕಗಳಿಗೆ ಮೀಟರ್ ಅಳವಡಿಸಿ ತೆರಿಗೆ ಸಂಗ್ರಹ ಮಾಡಿದಲ್ಲಿ ನಗರಸಭೆ ಆದಾಯ ಹೆಚ್ಚಿಸಬಹುದಾಗಿದೆ ಎಂದು ನಗರಸಭೆ ಸದಸ್ಯ ಅರುಣ್ ಕುಮಾರ್ ಸಲಹೆ ನೀಡಿದರು.

ಇದಕ್ಕೆ ನಗರಸಭೆ ಆಯುಕ್ತ ನೀಲಲೋಚನಾ ಪ್ರಭು ಪ್ರತಿಕ್ರಿಯಿಸಿ, ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಅಮೃತ್ ಯೋಜನೆಯಡಿ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಕೆಗೆ ಅವಕಾಶವಿದೆ.

ಆ ನಿಟ್ಟಿನಲ್ಲಿ ಬರುವ ಬಜೆಟ್ ಸಭೆಯಲ್ಲಿ ಅನುಮೋದನೆ ಪಡೆದು ಕ್ರಮಕೈಗೊಳ್ಳಲಾಗುವುದು ಎಂದರು.

ನಗರಸಭೆ ಆಸ್ತಿ ನಗರದಲ್ಲಿ ಯಾವ ಬಾಗದಲ್ಲಿ ಆಸ್ತಿಗಳಿವೆ ಎಂದು ಗುರುತಿಸಬೇಕು. ತೆರಿಗೆ ವಸೂಲಿಯಲ್ಲಿ ತಾರತಮ್ಯ ಮಾಡುತಿದ್ದು ಬಡವರಿಗೆ ನೋಟಿಸ್ ನೀಡುವ ಅಧಿಕಾರಿಗಳು ಪ್ರಭಾವಿಗಳಿಗೆ ಇದರ ಮಾಹಿತಿ ನೀಡುತ್ತಿಲ್ಲ. ನಗರಸಭೆ ವಾಣಿಜ್ಯ ಮಳಿಗೆಗಳಲ್ಲಿ ಒಳಬಾಡಿಗೆ ಅಕ್ರಮ ನೆಡೆಯುತಿದೆ. ಆದ್ದರಿಂದ ನಗರಸಭೆಗೆ ಆದಾಯ ಕುಂಟಿತವಾಗುತ್ತಿದೆ. ನಗರದಲ್ಲಿ ಅನಧಿಕೃತ ಬಡಾವಣೆ ಹಾಗೂ ಅಪಾರ್ಟ್‌ಮೆಂಟ್‌ಗಳಿದ್ದು ಅವುಗಳ ಮಾಹಿತಿ ಪಡೆದು ನಗರಸಭೆ ಕ್ರಮ ಕೈಗೊಳ್ಳಬೇಕು. -ನಾಗರಾಜ್ ವರದಾಪುರ್, ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಅಧ್ಯಕ್ಷ ಸಭೆಯಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ನೀಡಿರುವ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ಆಯ ವ್ಯಯದಲ್ಲಿ ಅಳವಡಿಸಿಕೊಂಡು ಕ್ರಮ ಕೈಗೊಳ್ಳಬಹುದಾಗಿದೆ ಎಂದರು. ಆಶಾರಾಜ್ ಶೇಖರ್, ನಗರಸಭೆ ಅಧ್ಯಕ್ಷೆ.

ಆದಾಯ ಮೂಲಗಳ ಮಾಹಿತಿ ನೀಡಿ: ನಗರಸಭೆಯ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮೊದಲಿಗೆ ನಗರಸಭೆಗೆ ಬರಬೇಕಾದ ಆದಾಯದ ಮೂಲಗಳ ಬಗ್ಗೆ ಮಾಹಿತಿ ನೀಡಬೇಕು, ಇನ್ನೂ ಹೆಚ್ಚಿನ ಆದಾಯ ಮೂಲಗಳನ್ನು ಸೃಷ್ಟಿ ಮಾಡುವ ಸಲುವಾಗಿ ಸಭೆಯಲ್ಲಿ ಸಲಹೆ ಸೂಚನೆ ಪಡೆಯಬೇಕು ಎಂದು ಹಿರಿಯ ಮುಖಂಡ ಜಿ ಶ್ರೀನಿವಾಸ್ ಸಭೆಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net