

ತುಮಕೂರು: ಕಳೆದ ವಾರ ಕೋರಂ ಕೊರತೆಯಿಂದ ಮುಂದೂಡಿದ್ದ ತಾಪಂ ಸಾಮಾನ್ಯ ಸಭೆಗೆ ಬುಧವಾರ ಆರಂಭದಲ್ಲೇ ವಿಘ್ನ ಎದುರಾಯಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿ ಕೋಲಾಹಲ ಸೃಷ್ಟಿಸಿತು.
ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಏಕಪಕ್ಷೀಯ ನಿರ್ಧಾರದ ಬಗ್ಗೆ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಊರುಕೆರೆ ಕ್ಷೇತ್ರದ ಬಿಜೆಪಿಯ ವಿಜಯಕುಮಾರ್ ಏರುಧ್ವನಿಯಲ್ಲಿ ಮಾತನಾಡಿದ್ದು ಪ್ರತಿಪಕ್ಷದವರನ್ನು ಕೆರಳಿಸಿತ್ತು. ಕ್ಷಣಾರ್ಧದಲ್ಲಿ ಸಭೆ ಗೊಂದಲದ ಗೂಡಾಯಿತು. ತಾಪಂ ಇಒ ಜೈಪಾಲ್ ಸೇರಿ ಅಧಿಕಾರಿಗಳು ಮೂಕಪ್ರೇಕ್ಷಕರಾದರು.
ಅಧ್ಯಕ್ಷೆ ಎನ್.ಇ.ಕವಿತಾ, ಉಪಾಧ್ಯಕ್ಷ ಶಾಂತಕುಮಾರ್ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಧು ಎಲ್ಲ ಸದಸ್ಯರ ಮನವೊಲಿಸಿ ಸಭೆ ನಡೆಯಲು ಸಹಕರಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಕುರಿತು ಚರ್ಚಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಸಮಾಧಾನಗೊಂಡರು.
ಸಭೆಗೆ ಬಹಿಷ್ಕಾರ: ಈ ಮಧ್ಯೆ ಕೋರಾ ತಾಪಂ ಸದಸ್ಯೆ ಕವಿತಾ ರಮೇಶ್ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಮಹಿಳೆಯೊಬ್ಬರು 3 ವರ್ಷದಿಂದ ಸೂರಿಗಾಗಿ ಅಲೆಯುತ್ತಿದ್ದು ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿದಾಗ ಉಪಾಧ್ಯಕ್ಷ ಶಾಂತಕುಮಾರ್, ಬಿಜೆಪಿ ಸದಸ್ಯ ವಿಜಯಕುಮಾರ್ ಅಡ್ಡಿಪಡಿಸಿದರು. ದಲಿತ ಮಹಿಳೆ ಪರ ಸಭೆಯಲ್ಲಿ ನ್ಯಾಯ ಕೇಳಲು ಆಸ್ಪದ ನೀಡದ್ದಕ್ಕೆ ಅಸಮಾಧಾನಗೊಂಡ ಕವಿತಾ ಸಭೆ ಬಹಿಷ್ಕರಿಸಿ ಹೊರನಡೆದರು. 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಶೌಚಗೃಹ ನಿರ್ಮಾಣ ಮತ್ತು ದುರಸ್ತಿ, ಸರ್ಕಾರಿ ಶಾಲಾ ಕಟ್ಟಡ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಕಟ್ಟಡ ಕಾಮಗಾರಿಗಳ ನಿರ್ಮಾಣ ಮತ್ತು ದುರಸ್ತಿ ಸೇರಿ ಹಲವರು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.
ಉಪಾಧ್ಯಕ್ಷರದ್ದೇ ಕಾರುಬಾರು: ಉಪಾಧ್ಯಕ್ಷ ಶಾಂತಕುಮಾರ್ ಸಭೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಸಭೆಯುದ್ದಕ್ಕೂ ಬಿಜೆಪಿ ಸದಸ್ಯ ವಿಜಯಕುಮಾರ್ ಅವರದ್ದೇ ಆರ್ಭಟವಾಗಿತ್ತು. ಇನ್ನು ಅಧ್ಯಕ್ಷೆ ಕವಿತಾ ಮೌನಕ್ಕೆ ಶರಣಾಗಿದ್ದರೆ, ಶಾಂತಕುಮಾರ್ ಎಲ್ಲವನ್ನೂ ನಿಯಂತ್ರಿಸುವ ಜತೆಗೆ ಉತ್ತರ ಕೂಡಾ ಕೊಡುತ್ತಿದ್ದರು.