ಭಕ್ತಿ, ನಿಷ್ಠೆಯ ಧ್ಯಾನದಿಂದ ಆತ್ಮ ನ್ಯೂನತೆ ದೂರ: ಉಪ್ಪುಂದ ಶಾಖಾ ಮಠದಲ್ಲಿ ಮಂತ್ರಾಲಯ ಸ್ವಾಮೀಜಿ ಆಶೀರ್ವಚನ

mantralaya new
Published on

ಬೈಂದೂರು: ಭಕ್ತಿ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಂದು ಜೀವರಾಶಿಯಲ್ಲೂ ದೇವರನ್ನು ಕಾಣುವಂತಾಗಬೇಕು. ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿ ಹಾಗೂ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲ ನ್ಯೂನತೆಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ ಎಂದು ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯಿಂದ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಉಪ್ಪುಂದದಲ್ಲಿರುವ ಮಂತ್ರಾಲಯ ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.

ಮಂತ್ರಾಲಯದಲ್ಲಿ ರಾಯರ ಬೃಂದಾವನ ನಿರ್ಮಾಣವಾಗಿ 350 ವರ್ಷಗಳಾಗಿವೆ. ರಾಯರ ತಪಸ್ಸಿಗೆ 400 ವರ್ಷಗಳಾಗಿವೆ. ಉಪ್ಪುಂದ ಮಠ ರಜತ ಮಹೋತ್ಸವದ ಹೊಸ್ತಿಲಲ್ಲಿದೆ. ಉಪ್ಪುಂದ ಮಠ ನಮ್ಮ ಆಡಳಿತಕ್ಕೊಳಪಟ್ಟಿದ್ದರೂ ಇದನ್ನು ಜಾತಿಭೇದ ಇಲ್ಲದೆ ಧರ್ಮಶ್ರದ್ಧೆಯಿಂದ ಈ ಭಾಗದ ರಾಯರ ಭಕ್ತರು ಕೀರ್ತಿ, ಧನಪ್ರದವಾದ ದ್ರವ್ಯಗಳ ಮೂಲಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಠದ ಸ್ಥಳದಾನಿ ಯು.ಸುಭಾಷ್ ಪುರಾಣಿಕ್ ಮತ್ತು ಯು.ಸತ್ಯನಾರಾಯಣ ಪುರಾಣಿಕ್ ದಂಪತಿ ಪಾದಪೂಜೆ ಸಲ್ಲಿಸಿದರು. ಮಠದಲ್ಲಿ ಸ್ವಾಮೀಜಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡಿದರು. ಮಠದ ಪಕ್ಕದಲ್ಲಿರುವ ಉಪ್ಪುಂದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ 3.30ಕ್ಕೆ ಉಪ್ಪುಂದ ಮಠಕ್ಕೆ ಆಗಮಿಸಬೇಕಾಗಿದ್ದ ಸ್ವಾಮೀಜಿ ರಾತ್ರಿ 8ಕ್ಕೆ ಬಂದರೂ ಮಧ್ಯಾಹ್ನದಿಂದ ಮಠದಲ್ಲಿ ನೂರಾರು ಭಕ್ತರು ಕಾದು ಕುಳಿತಿದ್ದರು. ಶ್ರೀಗಳು ಎಲ್ಲರಿಗೂ ಮಂತ್ರಾಕ್ಷತೆ, ಪ್ರಸಾದ ನೀಡಿ ಆಶೀರ್ವದಿಸಿ ರಾತ್ರಿ 10ಕ್ಕೆ ಮಂತ್ರಾಲಯಕ್ಕೆ ತೆರಳಿದರು.

ಪಾಜಕ ಕ್ಷೇತ್ರದಲ್ಲಿ ಮಠದ ವತಿಯಿಂದ 10 ಎಕರೆ ಸ್ಥಳ ಖರೀದಿಸಿದ್ದೇವೆ. ಇದನ್ನು ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಕರೊನಾ ಮಹಾಮಾರಿಯಿಂದ ದೇಶದಲ್ಲಿ ನಿಂತುಹೋದ ವ್ಯವಹಾರ, ವಹಿವಾಟುಗಳು ಪ್ರಸ್ತುತ ಸಹಜ ಸ್ಥಿತಿಗೆ ಮರಳುತ್ತಿದ್ದು, ಮುಂದೆ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ರಾಯರಲ್ಲಿ ಪ್ರಾರ್ಥಿಸುತ್ತೇನೆ.

ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ, ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net