ಉಪ್ಪುಂದ ಜಾತ್ರೆಗೆ ಚಾಲನೆ

jatre
Published on

5ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ ನಾಂದಿ, ಧ್ವಜ ವಾಹನ ಅದಿವಾಸ, ಅಸ್ತ್ರ ಹೋಮದೊಂದಿಗೆ ಇತರ ಧಾರ್ಮಿಕ ವಿಧಾನಗಳೊಂದಿಗೆ ಕೊಡಿಮರವನ್ನು ಧ್ವಜಸ್ತಂಭಕ್ಕೆ ನಿಲ್ಲಿಸಿ ಸಿಂಹಪಟಾವರೋಹಣ ಹಾಗೂ ಧ್ವಜಬಲಿ ನೆರವೇರಿಸಲಾಯಿತು. ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ಗಜಾರೋಹಣೋತ್ಸವ. ಅಶ್ವಾರೋಹಣೋತ್ಸವ, ಮಯೂರ ವಾಹನೋತ್ಸವ, ರಂಗಪೂಜೆ ಮತ್ತು ಪುಷ್ಪಕ ಸಿಂಹಾರೋಹಣೋತ್ಸವ ನಡೆಯಲಿದೆ. ಡಿ.1ರಂದು ಶ್ರೀ ಮನ್ಮಹಾರಥೋತ್ಸವ, ಡಿ. 2ರಂದು ಚೂರ್ಣೋತ್ಸವ, ಡಿ.3ರಂದು ಧ್ವಜಾವರೋಹಣ ಮತ್ತು ನಗರೋತ್ಸವ ನಡೆಯಲಿದೆ.

ಸಂಜೆ ಕಟ್ಟೆ ಉತ್ಸವ: ರಥೋತ್ಸವ ಸಂದಭರ್ ಉಪ್ಪುಂದ, ಬಿಜೂರು ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆ ಪೂಜೋತ್ಸವಗಳು ನಡೆಯುತ್ತವೆ. ಮೊದಲನೇ ದಿನ ಸಾಯಂಕಾಲ ಉಪ್ಪುಂದ ರಥಬೀದಿಯ ಪೂರ್ವ ಸ.ಕಿ.ಪ್ರಾ. ಶಾಲೆ ಬಳಿಯ ಏರು ಕಟ್ಟೆ, ಎರಡನೇ ದಿನ ಹಳಗದ ಹಿತ್ಲು ಕಟ್ಟೆ, ಪುರಾಣಿಕರ ಕಟ್ಟೆ, ಬಿಜೂರು ಸರಾಫರ ಕಟ್ಟೆ, ಶೇರುಗಾರರ ಕಟ್ಟೆ, ಬಿಜೂರು ಮಯ್ಯರ ಕಟ್ಟೆ, ಮೂರನೇ ದಿನ ಶೆಟ್ಟರ್ ಕೇರಿ ಮಾದಯ್ಯ ಶೆಟ್ಟರ ಕಟ್ಟೆ, ವೈದ್ಯರಕೇರಿ ಕಟ್ಟೆ, ಮಾದಪ್ಪು ಮೈಯ್ಯರಕಟ್ಟೆ, ಕರಾವಳಿ ಕಾಯಿ ಭಂಡಶಾಲೆ ಕಟ್ಟೆ, ನಾಲ್ಕನೇ ದಿನ ಅಂಬಾಗಿಲು ತಿರ್ಕ ಶೆಟ್ಟರ ಕಟ್ಟೆ, ಕಟ್ಗೆರೆ ಶೆಟ್ಟರ ಕಟ್ಟೆ, ದೀಟಿ ಮಯ್ಯರ ಕಟ್ಟೆ, ಶೇಟ್‌ರ ಕಟ್ಟೆ, ಬೊಪ್ಪೆಹಕ್ಲು ಗಾಣಿಗರ ಕಟ್ಟೆ, ಐದನೇ ದಿನ ಓಲಗ ಮಂಟಪ ಕಟ್ಟೆ, ತೊಪ್ಪಲು ಕಟ್ಟೆ, ಚೋಟಿ ಗೋವಿಂದರ ಕಟ್ಟೆ, ಹೆಬ್ಬಾರಹಿತ್ಲು ಕಾರಂತರ ಕಟ್ಟೆ, ಕೆಳಾಮನೆ(ತಮ್ಮಣ್ಣ ಭಟ್ಟರ) ಕಟ್ಟೆ, ಪಠೇಲರ ಕಟ್ಟೆ, ಆರನೇ ದಿನ ರಥೋತ್ಸವ ನಡೆಯುತ್ತದೆ.

ಏಳನೇ ದಿನ ಬಿಜೂರು ಅರೆಕಲ್ಲು ಬ್ರಹ್ಮನ ಕಟ್ಟೆ ಹಾಗೂ ಹೊಳ್ಳರ ಮನೆ ಬಳಿ ಬಸ್ರೂರು ಶೆಟ್ಟರ ಕಟ್ಟೆ ಬಳಿಕ ನಗರೋತ್ಸವ ನಡೆಯಲಿದೆ. ಹಬ್ಬದ ಪರ‌್ಯಂತ ಊರಿನ ನಾಲ್ಕು ದಿಸೆಗಳಿಗೆ ದೇವಿಯು ಅಲಂಕೃತ ಪಲ್ಲಕ್ಕಿಯಲ್ಲಿ ವೈಭವದಿಂದ ದರ್ಶನ ನೀಡುವ, ವಿವಿಧ ಕಟ್ಟೆಗಳಲ್ಲಿ ಕುಳಿತು ಸಂಭ್ರಮಿಸುವ ಪದ್ಧತಿ ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net