ಆರೋಗ್ಯ ಸಂವರ್ಧನೆಗೆ ಹಣ್ಣುಗಳು ಅಗತ್ಯ

8-UPBR-3 AMMINBAVI
Published on

ಉಪ್ಪಿನಬೆಟಗೇರಿ: ಜೀವಸತ್ವ ಹಾಗೂ ಖನಿಜಗಳ ಆಗರವಾಗಿರುವ ಹಣ್ಣುಗಳನ್ನು ಮಕ್ಕಳಿಗೆ ನಿತ್ಯ ತಿನ್ನಲು ಕೊಡಬೇಕು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಸಮೀಪದ ಅಮ್ಮಿನಬಾವಿ ಶ್ರೀ ಗುರುಶಾಂತಲಿಂಗ ಶಿವಾಚಾರ್ಯ ಪೂರ್ವ ಪ್ರಾಥಮಿಕ ಶಾಲೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹಣ್ಣುಗಳ ದಿನದ ವಿಶೇಷ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ಮನುಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಹಣ್ಣುಗಳೂ ಒಳಗೊಂಡಿವೆ. ಅನೇಕ ವಿಧದ ಹಣ್ಣುಗಳ ಲಭ್ಯತೆ ಇದ್ದು, ಅವೆಲ್ಲವೂ ದೇಹದ ಆರೋಗ್ಯ ಕ್ರಿಯಾಶೀಲವಾಗಿರಲು ಸಹಾಯ ಮಾಡುತ್ತವೆ. ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ನಿಸರ್ಗದ ಹಣ್ಣುಗಳ ಪರಿಚಯ ಮಾಡಿಕೊಡುತ್ತಿರುವುದು ಉತ್ತಮ ಕಾರ್ಯ ಎಂದು ಶ್ರೀಗಳು ಹೇಳಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಚಾಕೋಲೇಟ್, ಕುರಕುರಿ, ಚೀಪ್ಸ್ ಸೇರಿ ಇತರೆ ಕರಿದ ಪದಾರ್ಥಗಳ ಬದಲಾಗಿ ಮಕ್ಕಳಿಗೆ ಹಣ್ಣುಗಳನ್ನು ಕೊಡಬೇಕು. ಬಾಳೆಹಣ್ಣು, ಪೇರಲ, ಪಪ್ಪಾಯಿ, ಚಿಕ್ಕು ಮತ್ತು ಮಾವಿನಹಣ್ಣು ನೀಡಬೇಕು ಎಂದರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಬಿ.ಸಿ. ಕೊಳ್ಳಿ, ವಿ.ಬಿ. ಕೆಂಚನಗೌಡರ, ಚಂದ್ರು ಶೆಟ್ಟರ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶಿಕ್ಷಕಿ ಮಹೇಶ್ವರಿ ಹಳ್ಳಿಗೇರಿಮಠ, ದೀಪಾ ಕಂಬಳೆಣ್ಣವರ, ಜ್ಯೋತಿ ಕಾದ್ರೊಳ್ಳಿ, ಮಾಲತೇಶ ಆಲದಕಟ್ಟಿ, ಅನಸೂಯಾ ಆನಿಗೋಳ, ಮಂಜುಳಾ ದೊಡಮನಿ, ಲೀಲಾವತಿ ಅಣ್ಣಿಗೇರಿ, ವಿನಾಯಕ ಹಿರೇಮಠ, ಎಂ. ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net