ಚರ್ಚೆಗೆ ಗ್ರಾಸವಾದ ಜಾತಿಗಣತಿ : ಸದಸ್ಯರ ಅಸಮಾಧಾನ ಉಪ್ಪಿನಂಗಡಿ ಗ್ರಾಪಂ ಸಾಮಾನ್ಯ ಸಭೆ

New Project (15)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಪಂಚಾಯಿತಿ ಆಡಳಿತದ ಗಮನಕ್ಕೆ ತಾರದೇ ತಾತ್ಕಾಲಿಕ ನೆಲೆಯ ಸಿಬ್ಬಂದಿಯನ್ನು ಜಾತಿಗಣತಿ ಕಾರ್ಯಕ್ಕೆ ನೇಮಿಸಿರುವ ಬಗ್ಗೆ ಪಂಚಾಯಿತಿ ಸದಸ್ಯರು ಇಲ್ಲಿನ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ‌್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಹಾಗೂ ವರದಿ ಮಂಡಿಸಿ ಮಂಜೂರಾತಿ ಪಡೆದರು.

ಗ್ರಾಮದ ಸರ್ಕಾರಿ ಹೈಸ್ಕೂಲ್ ಮೈದಾನಕ್ಕೆ ಲೆಕ್ಕಕ್ಕೂ ಮೀರಿದ ಹೈಮಾಸ್ಕ್ ದೀಪ ಅಳವಡಿಸಿ ದುಂದು ವೆಚ್ಚ ಮಾಡಲಾಗಿದೆ. ಪಂಚಾಯಿತಿ ಅನುದಾನವನ್ನು ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಬೇಕು, ಗ್ರಾಮದ ಹಳೇ ಬಸ್ ನಿಲ್ದಾಣದಲ್ಲಿ ರಿಕ್ಷಾ ಚಾಲಕರ ಕೋರಿಕೆಗೆ ಸ್ಪಂದಿಸಿ ಧ್ವಜಸ್ತಂಭ ರಚನೆಗೆ ಅವಕಾಶಕೊಟ್ಟಿದ್ದು, ಇನ್ನೂ ಹಲವಾರು ಸಂಘ ಸಂಸ್ಥೆಗಳು ಅಲ್ಲಲ್ಲಿ ಧ್ವಜಸ್ತಂಭ ಸ್ಥಾಪಿಸಲು ಮುಂದಾದರೆ ಸಮಸ್ಯೆಗಳು ಎದುರಾಗಬಹುದೆಂದು ಸದಸ್ಯರು ಎಚ್ಚರಿಸಿದರು.

ಪಂಚಾಯಿತಿಯಲ್ಲಿ ಹಿಂದೆ ಕರ್ತವ್ಯ ನಿಭಾಯಿಸಿದ ನಿವೃತ್ತ ಪಿಡಿಒ ಪೂವಪ್ಪ ಬಂಗೇರ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಸುರೇಶ ಅತ್ರಮಜಲು, ಲೋಕೇಶ್ ಬೆತ್ತೋಡಿ, ಅಬ್ದುಲ್ ರಶೀದ್, ಅಬ್ದುಲ್ ರಹಿಮಾನ್ ವಿನಾಯಕ ಪೈ, ಉಷಾ ಮುಳಿಯ ಸಂಜೀವ ಮಡಿವಾಳ, ಶೋಭಾ, ರುಕ್ಮಿಣಿ, ಇಬ್ರಾಹಿಂ, ವನಿತಾ, ಜಯಂತಿ, ನೆಬಿಸಾ ಉಪಸ್ಥಿತರಿದ್ದರು. ಸಿಬ್ಬಂದಿ ಜ್ಯೋತಿ ವಂದಿಸಿದರು.

ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಪಂಚಾಯಿತಿ ಆವರಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹದ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ, ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ವಿಸ್ತರಣೆಗೊಂಡರೂ ಮಠ, ಕೂಟೇಲು ಬಳಿ ಪ್ರಯಾಣಿಕರ ತಂಗುದಾಣ ರಚಿಸಿಕೊಡಲು ಪ್ರಾಧಿಕಾರಕ್ಕೆ ಮನವಿ ಮಾಡಲು ಆಗ್ರಹ, ಕೆಂಪಿಮಜಲುನಲ್ಲಿ ಪಂಚಾಯಿತಿ ಅಧೀನದ ಗರಡಿ ಮನೆ ಬಳಕೆ ಮತ್ತು ನಿರ್ವಹಣೆಯಲ್ಲಿ ಲೋಪದೋಷವಿದೆ ಎಂಬ ಆರೋಪ ಇತ್ಯಾದಿ ಸಭೆಯಲ್ಲಿ ಕೇಳಿ ಬಂದಿತ್ತು. ಪೇಟೆಯಲ್ಲಿ ಹೆಚ್ಚುತ್ತಿರುವ ಬೀದಿನಾಯಿ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಬ್ರಾಹಿಂ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net