ಕೆಂಪುಕಲ್ಲು-ಮರಳಿನ ನಿರ್ಬಂಧ ಸಡಿಲಿಕೆಗೆ ಆಗ್ರಹ : ಉಪ್ಪಿನಂಗಡಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಬಡವರ ಮನೆ ನಿರ್ಮಾಣಕ್ಕೆ ಅಗತ್ಯವಾದ ಕೆಂಪುಕಲ್ಲು ಹಾಗೂ ಮರಳು ಸರಬರಾಜಿನಲ್ಲಿ ವ್ಯತ್ಯಯವುಂಟಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಕಾರಣಕ್ಕೆ ಕೆಂಪು ಕಲ್ಲು ಮತ್ತು ಮರಳಿಗೆ ವಿಧಿಸಿದ ನಿರ್ಬಂಧ ಸಡಿಲಿಸಲು ಸರ್ಕಾರವನ್ನು ಉಪ್ಪಿನಂಗಡಿ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಯಿತು.

ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.

ಮಳೆ ಹಾನಿಯಿಂದ ಮನೆ ಕಳೆದುಕೊಂಡವರು ಮನೆ ನಿರ್ಮಿಸಲು ಕಲ್ಲು, ಮರಳು ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರಾಗಿದ್ದವರು ಇದೀಗ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಸರ್ಕಾರದ ನೀತಿ ಜನಸಾಮಾನ್ಯರ ಹಿತ ಕಾಯುವಂತಾಗಿರಬೇಕೇ ವಿನಃ ಸತಾಯಿಸುವಂತಿರಬಾರದೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕೆಲದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಹಲವು ಮನೆಗಳ ಹಾನಿಯುಂಟಾಗಿದ್ದರೂ ಯಾವುದೇ ಅಧಿಕಾರಿಗಳಾಗಲಿ, ಶಾಸಕರಾಗಲಿ ಭೇಟಿ ನೀಡದಿರುವುದು ನಾಗರಿಕರಿಗೆ ಬೇಸರ ತಂದಿದೆ. ಪಂಚಾಯಿತಿ ಅಧೀನದ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಉಂಟಾಗುವ ಬೆಂಕಿ ಅವಡಗಳಿಗೆ ಪಂಚಾಯಿತಿ ಆಡಳಿತವನ್ನು ಹೊಣೆಯಾಗಿಸುವುದು ಸರಿಯಲ್ಲ. ಈ ಬಗ್ಗೆ ಮೆಸ್ಕಾಂ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕು. ಪ್ರವಾಸಿ ಬಂಗ್ಲೆ ಸಮೀಪದ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸೂಕ್ತ ಆವರಣ ಗೋಡೆ ನಿರ್ಮಿಸಬೇಕು, ತ್ಯಾಜ್ಯ ಸಂಗ್ರಹಣೆ ಶುಲ್ಕ ಸಂಗ್ರಹ ನ್ಯಾಯೋಚಿತವಾಗಿರಲಿ ಎಂಬ ಸಲಹೆಗಳು ವ್ಯಕ್ತವಾದವು.

ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ ನಟ್ಟಿಬೈಲ್, ಕೆ.ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ.ತೌಸ್ಿ, ಲೋಕೇಶ್ ಬೆತ್ತೋಡಿ, ಅಬ್ದುಲ್ ರಶೀದ್ ಪಿ.ವಿನಾಯಕ ಪೈ, ಜಯಂತಿ, ಇಬ್ರಾಹಿಂ, ರುಕ್ಮಿಣಿ, ನೆಬಿಸಾ, ಶೋಭಾ, ಉಷಾ ಉಪಸ್ಥಿತರಿದ್ದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸರ್ಕಾರಿ ಸುತ್ತೋಲೆ ಮಂಡಿಸಿದರು.

ಸೊತ್ತು ಹಾನಿಗೆ ಗ್ರಾಪಂ ಹೊಣೆಯಲ್ಲ

ಪಂಚಾಯಿತಿ ವತಿಯಿಂದ ಕೈಗೊಂಡ ಮರದ ತೆರವು ಕಾರ್ಯಾಚರಣೆಯಲ್ಲಿ ಹಲವೆಡೆ ಆವರಣ ಗೋಡೆಗೆ ಹಾನಿಯನ್ನುಂಟು ಮಾಡಲಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಯಿತು. ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಪಾಯಕಾರಿ ಮರಗಳ ಗೆಲ್ಲುಗಳನ್ನು ಅದರ ಮಾಲೀಕರೇ ತೆರವುಗೊಳಿಸಲು ವಿನಂತಿಸಲಾಗಿತ್ತು. ಅಪಾಯಕಾರಿ ಮರ ಮತ್ತು ಮರದ ಗೆಲ್ಲುಗಳನ್ನು ತೆರವುಗೊಳಿಸಲು ಡಿಸಿ ಸೂಚಿಸಿದ್ದರಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸೊತ್ತು ಹಾನಿಗೆ ಪಂಚಾಯಿತಿ ಹೊಣೆಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net