ಉಪ್ಪಿನಬೆಟಗೇರಿ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ನಾಳೆಯಿಂದ

UPBR VIRUPAKSHESHWAR
Published on

ಉಪ್ಪಿನಬೆಟಗೇರಿ: ಸ್ಥಳೀಯ ಜಗದ್ಗುರು ಮೂರುಸಾವಿರ ವಿರಕ್ತಮಠದ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾ. 23ರಿಂದ ಏಪ್ರಿಲ್ 2ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

23ರಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಡಾ.ಎಸ್.ಆರ್. ರಾಮನಗೌಡರ ಆಸ್ಪತ್ರೆ ಹಾಗೂ ಸ್ಥಳೀಯ ವೈದ್ಯರಿಂದ ಶ್ರೀಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಮಾ. 23 ರಿಂದ ಏ. 1 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಶ್ರೀಗುರು ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಆಕಾಶವಾಣಿ ಕಲಾವಿದ ಹಾಗೂ ಪ್ರವಚನ ಕೇಸರಿ ಕರೀಕಟ್ಟಿಯ ಪಂಡಿತ ಗಂಗಾಧರ ಶಾಸ್ತ್ರಿಗಳಿಂದ ಪ್ರವಚನ ನಡೆಯಲಿದೆ.

ಏ. 1ರಂದು ಬೆಳಗ್ಗೆ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಂಕಣ್ಣವರ ಹಾಗೂ ಬರಬರಿ ಬಂಧುಗಳು ಏರ್ಪಡಿಸಿರುವ ಜಂಗಮ ವಟುಗಳ ಶಿವದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮವನ್ನು ದೊಡವಾಡ ಹಿರೇಮಠದ ಶ್ರೀ ಜಡೆಸಿದ್ಧೇಶ್ವರ ಶಿವಚಾರ್ಯರು ನೆರವೇರಿಸುವರು. ಅಂದು ಸಂಜೆ ಪ್ರವಚನದ ಮಹಾಮಂಗಲ ನಡೆಯಲಿದೆ. ಬಳಿಕ ಹಳಿಯಾಳದ ಹಿರಿಯ ವೈದ್ಯ ಡಾ.ಬಿ.ಬಿ. ಮೂಡಬಾಗಿಲ ಅವರಿಗೆ 2025ರ ಸಾಲಿನ ‘ಲವಣಗಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಏ. 2ರಂದು ಬೆಳಗ್ಗೆ 10 ಗಂಟೆಗೆ ಧರ್ಮಸಭೆ, ಸಾಮೂಹಿಕ ವಿವಾಹ ಬಳಿಕ ಮಹಾಪ್ರಸಾದ ನಡೆಯಲಿದೆ. ಸಂಜೆ 4 ಗಂಟೆಗೆ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಳ ವಾದ್ಯ ವೈಭವಗಳೊಂದಿಗೆ ಜರುಗುವುದು.

ಸಂಜೆ 5 ಗಂಟೆಗೆ ಹರಗುರು ಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ವಿರೂಪಾಕ್ಷೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನಂತರ ಲವಣಗಿರಿ ಗೆಳೆಯರ ಬಳಗದ ಆಶ್ರಯದಲ್ಲಿ ಶ್ರೇಯಾ ಮೆಲೋಡಿಸ್ ತಂಡವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 10ಗಂಟೆಗೆ ಶ್ರೀ ಗುರು ವಿರೂಪಾಕ್ಷೇಶ್ವರ ನಾಟ್ಯ ಸಂಘದಿಂದ ‘ರೈತನ ಹೆಸರು ನಾಡಿನ ಉಸಿರು’ ಅರ್ಥಾತ್ ‘ಹಳ್ಳಿ ಹುಡುಗ ಬೆಳ್ಳಿ ಕಡಗ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಏ. 3, 4 ಮತ್ತು 5ರಂದು ಸಂಜೆ 4 ಗಂಟೆಗೆ ಸ್ಥಳೀಯ ಮಾಜಿ ಪೈಲವಾನರ ಸಂಘದಿಂದ ದೇವಸ್ಥಾನದ ಹೊಲದಲ್ಲಿ ಬಯಲು ಕುಸ್ತಿಗಳು ಜರುಗಲಿವೆ. ಈ ಎಲ್ಲ ಕಾರ್ಯಕ್ರಮಗಳು ವಿರಕ್ತಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿವೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net