ಸಿಎಂ ಹೆಗಲಿಗೆ ಆಯ್ಕೆ ಹೊಣೆ?: ಬಿಎಸ್​ವೈ ಪರ ನಿಲ್ಲಲಿದೆಯೇ ಹೈಕಮಾಂಡ್?

bsy
Published on

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುತ್ತಿರುವ ಚುನಾವಣೆ ಟಿಕೆಟ್ ಗಿಟ್ಟಿಸಲು ರಾಜಕೀಯ ಚಟುವಟಿಕೆ ಬಿರುಸಾಗಿ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕೋರ್ ಕಮಿಟಿಯಲ್ಲಿ ಸಿಎಂ ಶಿಫಾರಸು ಮಾಡಿರುವ ಹೆಸರುಗಳನ್ನು ಹೈಕಮಾಂಡ್ ನಿರ್ಲಕ್ಷಿಸಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಲು ಹೈಕಮಾಂಡ್ ಈ ತಂತ್ರ ಬಳಸುವ ಸಾಧ್ಯತೆ ಇದೆ ಎಂದು ಈ ಮೂಲಗಳು ಖಚಿತಪಡಿಸಿವೆ.

ನಾಲ್ವರು ಅಭ್ಯರ್ಥಿಗಳ ಆಯ್ಕೆ ಪೈಕಿ ಒಬ್ಬರನ್ನು ಮಾತ್ರ ಹೈಕಮಾಂಡ್ ಆಯ್ಕೆಯಾಗಿ ಉಳಿಸಿಕೊಳ್ಳಬಹುದು. ಇನ್ನುಳಿದ ಮೂರು ಅಭ್ಯರ್ಥಿಗಳ ಆಯ್ಕೆಯನ್ನು ಮುಖ್ಯಮಂತ್ರಿಗಳಿಗೆ ನೀಡುವ ಮೂಲಕ ಸರ್ಕಾರ ನಡೆಸಲು ಅನುಕೂಲವಾಗುವಂತೆ ತೀರ್ಮಾನ ತೆಗೆದುಕೊಳ್ಳುವಂತೆ ಮತ್ತು ಹಿಂದೆ ನೀಡಿರುವ ಭರವಸೆ ಮಾತುಗಳನ್ನು ಉಳಿಸಿಕೊಳ್ಳುವಂತೆ ಸೂಚನೆ ನೀಡಬಹುದು ಎಂದು ತಿಳಿದುಬಂದಿದೆ.

ವಿಧಾನ ಪರಿಷತ್ ಚುನಾವಣೆಗೂ ಅಭ್ಯರ್ಥಿಗಳನ್ನು ಹೈಕಮಾಂಡ್ ಆಯ್ಕೆ ಮಾಡಿದರೆ ಸರ್ಕಾರದ ಮೇಲೆ ಮಾರಕ ಪರಿಣಾಮ ಬೀರಬಹುದು. ಮುಂದೊಂದು ದಿನ ಇದೇ ದೊಡ್ಡ ವಿಷಯವಾಗಿ ಸರ್ಕಾರಕ್ಕೆ ಸಂಚಕಾರ ತರುವ ಹಂತಕ್ಕೆ ಹೋಗಬಹುದು. ಆದ್ದರಿಂದ ಯಡಿಯೂರಪ್ಪ ಅವರ ವಿಶ್ವಾಸ ಉಳಿಸಿಕೊಂಡೇ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿಎಂಗೆ ಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ಹೈಕಮಾಂಡ್ ಮೇಲೆ ಬಂದಿರುವ ದೂರುಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಪಕ್ಷಕ್ಕೆ ಕರೆತರುವಾಗ ಪರಿಷತ್ ಟಿಕೆಟ್ ನೀಡುವ ಭರವಸೆ ಯಾರಿಗೂ ಕೊಟ್ಟಿಲ್ಲ. ಚುನಾವಣೆಗೆ ನಿಲ್ಲದವರಿಗೆ ಪರಿಷತ್ ಟಿಕೆಟ್ ನೀಡುವುದಾಗಿ ಹೇಳಲಾಗಿತ್ತು. ಆರ್.ಶಂಕರ್ ಚುನಾವಣೆಗೆ ನಿಂತಿರಲಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದು ಖಚಿತ. | ಡಾ.ಅಶ್ವತ್ಥನಾರಾಯಣ್ ಉಪ ಮುಖ್ಯಮಂತ್ರಿ

ಅಭ್ಯರ್ಥಿಗಳ ಆಯ್ಕೆಯಲ್ಲಿ ಸಮತೋಲನ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಮತೋಲನದ ನಡೆ ಇರಲಿದೆ. ಹಿಂದಿನ ಅನುಭವ ಆಧರಿಸಿ ಕೋರ್ ಕಮಿಟಿಯಲ್ಲಿ ರ್ಚಚಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಜತೆ ದೂರವಾಣಿಯಲ್ಲಿ ಮಾತನಾಡಿರುವೆ. ರಾಷ್ಟ್ರೀಯ ನಾಯಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಭ್ಯರ್ಥಿಗಳನ್ನು ಆರಿಸಲು ವಿನಂತಿಸಿರುವುದಾಗಿ ತಿಳಿಸಿದರು.

ವಿಶ್ವನಾಥ್​ಗೆ ಪರೋಕ್ಷ ಕುಟುಕು: ಪಕ್ಷ ಕಟ್ಟಿದವರು, ಸರ್ಕಾರ ಬರಲು ಕಾರಣರಾದವರು ಇಬ್ಬರನ್ನೂ ಪರಿಗಣಿಸುತ್ತೇವೆ. ಸರ್ಕಾರ ಬರಲು ಕಾರಣರಾದವರಿಗೆ ಹೆಚ್ಚು ಆದ್ಯತೆ ನೀಡಿದರೆ, ಪಕ್ಷ ಕಟ್ಟಿದವರು ಸಿಟ್ಟಿಗೇಳುತ್ತಾರೆ ಎಂದು ಸದ್ಯದ ಸ್ಥಿತಿ ಬಿಚ್ಚಿಟ್ಟರು. ಸರ್ಕಾರ ಬರುವುದಕ್ಕೆ ನಾವು ಕಾರಣ ಅಂತ ಹಲವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಗೆಲುವಿಗೆ ಸಾವಿರಾರು ಅಪ್ಪ-ಅಮ್ಮಂದಿರು ಎಂದು ಮೇಲ್ಮನೆ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಎಚ್.ವಿಶ್ವನಾಥ್​ಗೆ ಸಿ.ಟಿ.ರವಿ ಪರೋಕ್ಷವಾಗಿ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net