

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ನ 7 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಆಡಳಿತಾ ರೂಢ ಬಿಜೆಪಿಯಲ್ಲಿ ತೆರೆಮರೆಯ ಲಾಬಿ ಜೋರಾಗಿದ್ದು, ಪಕ್ಷದ ರಾಜ್ಯ ನಾಯಕರು ಹಾಗೂ ವರಿಷ್ಠರಿಗೆ ಒತ್ತಡದ ಪರಿಸ್ಥಿತಿ ನಿಭಾಯಿಸುವ ದೊಡ್ಡ ಸವಾಲು ಎದುರಾಗಿದೆ.
ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 4 ಸ್ಥಾನಗಳು ಸುಲಭವಾಗಿ ದಕ್ಕುತ್ತವೆ. ರಾಜ್ಯಸಭೆ ಚುನಾವಣೆಗೆ ತಳಮಟ್ಟದ ಅಭ್ಯರ್ಥಿಗಳ ಆಯ್ಕೆ ಪ್ರಯೋಗ, ಅಚ್ಚರಿಯ ತಂತ್ರಗಾರಿಕೆ ಪ್ರಬಲ ಆಕಾಂಕ್ಷಿಗಳಲ್ಲಿ ಎದೆಗುದಿ ತಂದಿಟ್ಟಿದ್ದರೆ, ಸಾಮಾನ್ಯ ಕಾರ್ಯಕರ್ತರ ಜತೆಗೆ ಟಿಕೆಟ್ಗೆ ಹೊಸ ಪಡೆಯೊಂದು ಸೃಷ್ಟಿಯಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಪ್ರಾತಿನಿಧ್ಯ ಬೇಡಿಕೆ: ಪ್ರದೇಶ, ಜಿಲ್ಲೆ, ವರ್ಗ ಹಾಗೂ ಜಾತಿವಾರು ಪ್ರಾತಿನಿಧ್ಯದ ಆಧಾರದಲ್ಲಿ ರಾಷ್ಟ್ರ, ರಾಜ್ಯ ನಾಯಕರ ಮುಂದೆ ಬೇಡಿಕೆಯಿಟ್ಟು ಪಕ್ಷದ ನಿಷ್ಠೆ, ಸೇವಾನುಭವದ ಅಳತೆಗೋಲನ್ನು ಬಯಕೆಗೆ ಪೂರಕ ಪುರಾವೆಯಾಗಿ ಒದಗಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ನೆಲೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಕೋಟೆ ಶಿವಣ್ಣ, ಸುನಿಲ್ ವಲ್ಯಾಪುರೆ, ಎನ್.ಶಂಕ್ರಪ್ಪ, ನಿರ್ಮಲ್ಕುಮಾರ್ ಸುರಾನ, ಸಿ.ಪಿ.ಯೋಗೇಶ್ವರ್, ಮಾ,ನಾಗರಾಜ್, ಮಾಲೀಕಯ್ಯ ಗುತ್ತೇದಾರ್, ನೆ.ಲ.ನರೇಂದ್ರಬಾಬು, ಲಿಂಗರಾಜ ಪಾಟೀಲ್, ಸುಬ್ಬಣ್ಣ, ಭಾನುಪ್ರಕಾಶ್, ಭಾರತಿಶೆಟ್ಟಿ, ಶ್ರುತಿ, ಮಾಳವಿಕಾ ಅವಿನಾಶ್, ಅಪ್ಪಣ್ಣ, 2 ಮತ್ತು 3ನೇ ಹಂತದ ಮುಖಂಡರು, ದಶಕಗಳ ಕಾಲ ಸಂಘಟನೆಗಾಗಿ ತಳಹಂತದಲ್ಲಿ ಶ್ರಮಿಸಿದವರು, ವಿವಿಧ ಕ್ಷೇತ್ರಗಳ ನೈಪುಣ್ಯತೆ ಸಾಧಿಸಿದವರು ಹೀಗೆ ಆಕಾಂಕ್ಷಿತರ ಪಟ್ಟಿ ಬೆಳೆಯುತ್ತದೆ. ಬೇಡಿಕೆ ಹಾಗೂ ಲಭ್ಯತೆ ನಡುವಿನ ಅಜಗಜಾಂತರವನ್ನು ಸರಿದೂಗಿಸುವುದು, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ಬಿಎಸ್ವೈ ಸೇರಿ ಹಲವರಿಗೆ ಅಗ್ನಿ ಪರೀಕ್ಷೆಯಾಗಿದ್ದರೆ, ರಾಷ್ಟ್ರಮಟ್ಟದ ಕೆಲವು ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಶೀಘ್ರವೇ ಕೋರ್ ಕಮಿಟಿ: ಅಭ್ಯರ್ಥಿಗಳ ಆಯ್ಕೆಯಾಗಿ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಪ್ರತಿ ಅಭ್ಯರ್ಥಿ ಆಯ್ಕೆ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿ 8 ಹೆಸರು ಶಿಫಾರಸು ಮಾಡಲು ಉದ್ದೇಶಿಸಲಾಗಿದೆ.
25ರವರೆಗೆ 600 ಸಮರ್ಥ ರ‍್ಯಾಲಿ
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ 2ನೇ ಅವಧಿಯಲ್ಲಿ ಮೊದಲ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ ಅಡಿಯಲ್ಲಿ ಜೂ.25ರವರೆಗೆ ರಾಜ್ಯಾದ್ಯಂತ 600ಕ್ಕೂ ಹೆಚ್ಚು ರ‍್ಯಾಲಿ ನಡೆಸಿ 1 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ.
ಗುರುವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಹಾಗೂ ಮೋಹನ ಟೆಂಗಿನಕಾಯಿ, ಸಾಮಾಜಿಕ ಜಾಲತಾಣ ಬಳಸಿಕೊಂಡು ಎಲ್ಲ್ಲ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನ, 311 ಮಂಡಲದಲ್ಲಿ ರ್ಯಾಲಿ, 5 ಮೋರ್ಚಾಗಳಿಂದ 115 ರ‍್ಯಾಲಿ ನಡೆಸಲಾಗುವುದು ಎಂದರು.
ಜೂ. 14ರ ಸಂಜೆ 6 ಗಂಟೆಗೆ ಬೃಹತ್ ವರ್ಚುವಲ್ ರ್ಯಾಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಅಂದು ದೆಹಲಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮಾತನಾಡಲಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ 20 ಲಕ್ಷಕ್ಕೂ ಅಧಿಕ ಜನರನ್ನು ತಲುಪುವ ನಿರೀಕ್ಷೆ ಇದೆ ಎಂದರು.
ಭಾರತ ಗೆಲ್ಲಿಸೋಣ ಅಭಿಯಾನ: ನೆರೆ ರಾಷ್ಟ್ರ ಚೀನಾ ವಿನಾಕಾರಣ ಭಾರತದ ವಿರುದ್ಧ ಗಡಿಯಲ್ಲಿ ತಗಾದೆ ತೆಗೆಯುತ್ತಿದೆ. ಕರೊನಾ ವೈರಸ್ ಹರಡಿಸಿರುವ ಕಮ್ಯುನಿಸ್ಟ್ ದೇಶವನ್ನು ಆರ್ಥಿಕವಾಗಿ ಬಗ್ಗುಬಡಿಯಲು ಇದು ಸೂಕ್ತ ಸಮಯ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಚೀನಾ ದೇಶ ಉತ್ಪಾದಿಸುವ ಉತ್ಪನ್ನಗಳನ್ನು ಬಹಿಷ್ಕರಿಸಿ ಅವರ ವಿರುದ್ಧ ಆರ್ಥಿಕ ಯುದ್ಧದಲ್ಲಿ ಗೆಲುವು ಸಾಧಿಸೋಣ ಎಂದು ಕರೆ ನೀಡಿದರು.
ಟಿಕೆಟ್ಗಾಗಿ ಅರ್ಜಿ
ಬಿಜೆಪಿಯಲ್ಲಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿತರ ಪಟ್ಟಿ ಬೆಳೆಯುತ್ತಿದೆ. ನಿತ್ಯವೂ ಕಚೇರಿಗೆ ಅರ್ಜಿಗಳು ಬರುತ್ತಲೇ ಇವೆ. ರಾಜ್ಯಸಭೆ ಚುನಾವಣೆಯಲ್ಲಿ ಕೋರ್ ಕಮಿಟಿ ಶಿಫಾರಸು ಬದಿಗಿಟ್ಟು ಕಾರ್ಯಕರ್ತರಿಗೆ ಹೈಕಮಾಂಡ್ ಮಣೆ ಹಾಕಿದ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಪರ್ಧಾಕಾಂಕ್ಷಿಗಳಲ್ಲಿ ಹುರುಪು ಮೂಡಿದೆ.
ತ್ಯಾಗತ್ರಯರ ಭವಿಷ್ಯ ಅತಂತ್ರ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ‘ತ್ಯಾಗತ್ರಯರ’ ಪೈಕಿ ಇಬ್ಬರ ಭವಿಷ್ಯವೇ ಡೋಲಾಯಮಾನವಾಗಿದೆ. ವರಿಷ್ಠರ ಒಲವು, ನಿಲುವು ಇಂತಹ ಸನ್ನಿವೇಶ ಸೃಷ್ಟಿಗೆ ಕಾರಣವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಮೂರು ಜನರೂ ಒಂದೇ ಸಮುದಾಯಕ್ಕೆ ಸೇರಿರುವುದು, ಪಕ್ಷ ಮೂಲದವರಿಗೂ ಆದ್ಯತೆ ನೀಡಬೇಕೆಂಬುದು ಸೇರಿ ಹಲವು ಕಾರಣಗಳು ಇಬ್ಬರ ಭವಿಷ್ಯವನ್ನು ಅತಂತ್ರಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ಗೆ ಕಷ್ಟ, ಸ್ಪರ್ಧೆ ವಂಚಿತ ಆರ್.ಶಂಕರ್ಗೆ ಹಸಿರು ನಿಶಾನೆ ಸಿಗಬಹುದು ಎಂದು ಮೂಲಗಳು ತಿಳಿಸಿವೆ.