ಸಮಾಜದ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ, ಸಚಿವ ಸಂತೋಷ ಲಾಡ್ ಭರವಸೆ

20231001164526_0S3A4070-2.jpg
Published on

ಹುಬ್ಬಳ್ಳಿ: ಉಪ್ಪಾರ ಸಮಾಜವನ್ನು ಎಸ್ಸಿ ಕೆಟಗರಿಗೆ ಸೇರಿಸುವುದು, ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಸಮಾಜದ ನಿಯೋಗ ಬಂದರೆ ಅದರ ನೇತೃತ್ವ ವಹಿಸಿ ಸಿಎಂ ಬಳಿ ಕರೆದೊಯ್ದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಕಾಮಿರ್ಕ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.

ಇಲ್ಲಿಯ ಎಪಿಎಂಸಿ ಎದುರಿನ ವಿದ್ಯಾಧಿರಾಜ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜಕ್ಕೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ನೀಡುವುದು, ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಸಮಾಜದ ಮುಖಂಡ ವಿಷ್ಣು ಲಾತೂರ ಪ್ರಾಸ್ತಾವಿಕ ಮಾತನಾಡಿ, ಸಮಾಜವನ್ನು ಶೈಕ್ಷಣಿಕವಾಗಿ ಮುಂದುವರಿಸಬೇಕೆಂದು ಇಚ್ಚೆಯಿಂದ ಸಂಟನೆ ಕಾರ್ಯ ಮಾಡುತ್ತಿದ್ದೇವೆ. ಉಪ್ಪಾರ ನಿಗಮ ಸ್ಥಾಪನೆ ಮಾಡಿ ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ನಿಗಮಕ್ಕೆ ಕನಿಷ್ಠ ನೂರು ಕೋಟಿ ರೂ. ಅನುದಾನ ಕೊಡಬೇಕು. ಸಮಾಜಕ್ಕೆ ರಾಜಕೀಯ ಅಧಿಕಾರ ಕೊಡಬೇಕು ಎಂದು ಆಗ್ರಹಿಸಿದರು.

ವಿಶ್ವ ಭಗೀರಥ ಟ್ರಸ್ಟ್ ವತಿಯಿಂದ ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಆಥಿರ್ಕ ನೆರವು ನೀಡಬೇಕು. ಸಮಾಜದ ಮುಖಂಡ, ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಹೆಚ್ಚಿನ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು. ಸಮಾಜದ ಬೇಡಿಕೆ ಈಡೇರುವವರೆಗೆ ಹೋರಾಟ ಮಾಡುತ್ತೇವೆ. ಇಲ್ಲದಿದ್ದರೆ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ವಿಷ್ಣು ಅವರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ವಸಿಷ್ಟ ಆಶ್ರಮದ ಶ್ರೀ ಭಾರ್ಗವನಂದಗಿರಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಶಂಕರ ಬೆಳ್ಳುಬ್ಬಿ ಅವರಿಗೆ ಭಗಿರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಸಕರಾದ ಅರವಿಂದ ಬೆಲ್ಲದ, ಪ್ರದಿಪ ಶೆಟ್ಟರ, ನಿವೃತ ನ್ಯಾಯಾಧೀಶ ಎಚ್. ಬಿಲ್ಲಪ್ಪ, ಗೋವಿಂದ ಜೋಶಿ, ಸಮಾಜದ ಹಿರಿಯರು, ಮಾಜಿ ಅಧ್ಯಕ್ಷ ಸುರೇಶ ಲಾತೂರ, ವಸಂತ ಹೊರಟ್ಟಿ, ರಾಜು ಉಪ್ಪಾರ, ಸುಭಾಸ ಪೂಜಾರ, ಗೀತಾ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net