ಸೆ.2 ರಿಂದ ಉಪ್ಪಲದಿನ್ನಿ ಸಂಗಮೇಶ್ವರ ಜಾತ್ರೆ

UPPALADINNI SANGAMESHWARA
ಉಪ್ಪಲದಿನ್ನಿ ಸಂಗಮೇಶ್ವರ
Published on

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಸುಕ್ಷೇತ್ರ ಉಪ್ಪಲದಿನ್ನಿ ಸಂಗಮೇಶ್ವರ ಜಾತ್ರೆ ಸೆ.2 ರಿಂದ ಸೆ.7ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಸೆ.2 ರಂದು ಸಂಜೆ 4 ಕ್ಕೆ ಜೈನಾಪುರ ಗ್ರಾಮದಿಂದ ಕಂಬಿ, ನಂದಿಕೋಲು, ಕಳಶ ಆಗಮಿಸುವವು. ಸಂಜೆ 5 ಕ್ಕೆ ಸುಕ್ಷೇತ್ರದ ಸಮಸ್ತ ದೇವಾಲಯಗಳ ಕಳಸಾರೋಹಣ ಹಾಗೂ ರಾತ್ರಿ 10 ಕ್ಕೆ ವಿವಿಧ ಗ್ರಾಮಗಳ ಭಜನಾ ಮೇಳಗಳಿಂದ ಭಜನೆ ನಡೆಯಲಿದೆ. ಸೆ.3ರಂದು ಬೆಳಗ್ಗೆ 8 ಕ್ಕೆ ಶ್ರೀ ಸಂಗಮೇಶ್ವರರ ಪಲ್ಲಕ್ಕಿ ಹಾಗೂ ನಂದಿಕೋಲು ಉತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯದಿಂದ ಶಿವಾಲಯಕ್ಕೆ ಹೋಗುವುದು. ಈ ವೇಳೆ ಅಸಂಖ್ಯಾತ ಸದ್ಭಕ್ತಗಣ ದಿಂಡರಿಕಿ ಸೇವೆ ಸಲ್ಲಿಸುವರು. ತಿಂಗಳ ಪರ್ಯಂತ ನಡೆದುಬಂದ ಭಜನಾ ಕಾರ್ಯಕ್ರಮದ ಮುಕ್ತಾಯ ಮಂಗಳಾರತಿ ಜರುಗುವುದು.

ಸೆ.4ರಂದು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಸಂಪ್ರದಾಯದಂತೆ ಶಿವಾಲಯದ ಆವರಣದಲ್ಲಿ ಪಲ್ಲಕ್ಕಿ ಹಾಗೂ ನಂದಿಕೋಲು ಸೇವೆ ಜರುಗಲಿದೆ. ಸೆ.5ರಂದು ಬೆಳಗ್ಗೆ ಶಿವಾಲಯದಲ್ಲಿ ಪಲ್ಲಕ್ಕಿ ಸೇವೆ ನಂತರ ಸಂಜೆ 5 ಕ್ಕೆ ದೊಡ್ಡ ನಂದಿಕೋಲು ಉತ್ಸವ, ರಾತ್ರಿ ಬೆಳ್ಳುಬ್ಬಿ ಗ್ರಾಮದ ಮಳೇ ಮಲ್ಲೇಶ್ವರ ನಂದಿಕೋಲು ಬರಮಾಡಿಕೊಳ್ಳುವುದು. ರಾತ್ರಿ 9 ಕ್ಕೆ ಶಿವಾಲಯದಲ್ಲಿ ನಂದಿಕೋಲು ಪಲ್ಲಕ್ಕಿ ಸೇವೆ ನಂತರ ರಾತ್ರಿ 10 ರಿಂದ ಭಜನೆ ನಡೆಯಲಿದೆ.

ಸೆ.6 ರಂದು ಮಧ್ಯಾಹ್ನ 2 ಕ್ಕೆ ಸಂಗಮೇಶ್ವರ ಪಲ್ಲಕ್ಕಿ ಹಾಗೂ ನಂದಿಕೋಲು ಮತ್ತು ಬೆಳ್ಳುಬ್ಬಿ ಮಳೇ ಮಲ್ಲೇಶ್ವರ ನಂದಿಕೋಲು ಉತ್ಸವ ನಡೆಯಲಿದೆ. ನಂತರ ಬೆಳ್ಳುಬ್ಬಿ ಮಳೇಮಲ್ಲೇಶ್ವರ ನಂದಿಕೋಲು ಬೀಳ್ಕೊಟ್ಟು ಊರೊಳಗಿನ ಸಂಗಮೇಶ್ವರ ದೇವಾಲಯಕ್ಕೆ ಉತ್ಸವ ಬಂದು ಶ್ರೀ ಸಂಗಮೇಶ್ವರ ಮಹಾಪೂಜೆ, ಮಂಗಳಾರತಿ ಜರುಗುವುದು. ರಾತ್ರಿ10 ಕ್ಕೆ ಬಯಲಾಟ ನಡೆಯಲಿದೆ. ಸೆ.7ರಂದು ಬೆಳಗ್ಗೆ 10 ಕ್ಕೆ ಕ್ಷೇತ್ರದ ಸಮಸ್ತ ದೇವಾಲಯಗಳ ಕಳಸ ಇಳಿಸುವುದು ಹಾಗೂ ಮಂಗಳಾರತಿ ನೆರವೇರಿಸಲಾಗುವುದು. ಮಧ್ಯಾಹ್ನ 3 ಕ್ಕೆ ಸುಪ್ರಸಿದ್ಧ ಜಂಗಿ ಕುಸ್ತಿ ನಡೆಯುವುದು.

ಇನ್ನು ಆ.4 ರಿಂದ ಸೆ.9 ರವರೆಗೆ ಪ್ರತಿದಿನ ನಸುಕಿನಲ್ಲಿ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ನಿತ್ಯ ಅಭಿಷೇಕ ನೆರವೇರಲಿದೆ ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net