

ಶೃಂಗೇರಿ: ಲೌಕಿಕ ಜೀವನದಲ್ಲಿ ಭಗವಂತನ ಸೇವೆ ಹೆಚ್ಚಿನ ಆದ್ಯತೆ ನೀಡಬೇಕು ಆಗ ಮಾತ್ರ ಉನ್ನತ ಲ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಉಳ್ಳುವಳ್ಳಿ ಶ್ರೀವಡ್ಡಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಜಗದ್ಗುರು ಶ್ರೀಭಾರತೀತೀರ್ಥ ಮಹಾ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಸುವರ್ಣಭಾರತೀ ಯೋಜನೆಯಡಿ ನಿರ್ಮಿಸಿಕೊಟ್ಟಿರುವ ಶ್ರೀ ಭಾರತೀತೀರ್ಥಯಾಗ ಮಂಟಪ ಉದ್ಘಾಟಿಸಿ ಮಾತನಾಡಿ, ದೇವಾಲಯಕ್ಕೆ ಬರುವಾಗ ಲೌಕಿಕವಾದ ವಿಚಾರಗಳನ್ನು ಹೊರಗಿಟ್ಟು ಪರಿಶುದ್ಧ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಮಾಡಿದಾಗ ನಮಗೆ ಹೆಚ್ಚಿನ ಅಲೌಕಿಕ ಶಕ್ತಿ ದೊರೆಯುತ್ತದೆ ಎಂದರು.
ದೇವಾಲಯಕ್ಕೆ ಉನ್ನತವಾದ ಶಕ್ತಿಯಿದೆ. ಅದನ್ನು ನಮ್ಮ ಅನುಭವಕ್ಕೆ ಬರಬೇಕಾದರೆ ದೇವರ ಸನ್ನಿಧಿಗೆ ಬರುವಾಗ ಪಾವಿತ್ರೃ ಭಾವನೆಯಿಂದ ಬರಬೇಕು.ಆಗ ಮಾತ್ರ ಭಗವಂತ ಸಂತುಷ್ಟನಾಗುತ್ತಾನೆ. ಶ್ರದ್ಧೆ ಇಲ್ಲದೇ ನಿರ್ವಹಿಸುವ ಕೆಲಸವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ತಿಳಿಸಿದ್ದಾನೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳಲ್ಲಿ ಭಗವಂತನ ಸಾನ್ನಿಧ್ಯ ಇರುತ್ತದೆ. ದೇವಸ್ಥಾನದ ಪವಿತ್ರತೆಯನ್ನು ನಾವು ಕಾಪಾಡಬೇಕು ಎಂದು ತಿಳಿಸಿದರು.