

ಮಂಜೇಶ್ವರ: ಶ್ರಾವಣ ಮಾಸದ ಎರಡನೇ ಶುಕ್ರವಾರ ನಡೆಯುವ ಶ್ರೀ ವರಮಹಾಲಕ್ಷ್ಮೀ ವ್ರತ ತಿಂಗಳ ಕಾಲ ನಡೆಯುವ ಸತ್‌ಚಿಂತನೆಯನ್ನೊಳಗೊಂಡ ವಿಚಾರದಿಂದ ಸಮಾಜದ ಉನ್ನತಿಯಾಗುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಶುಕ್ರವಾರ ವಿಶ್ವಹಿಂದು ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಮತ್ತು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಸಹಯೋಗದೊಂದಿಗೆ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯಲ್ಲಿ ಆಶೀರ್ವಚನ ನೀಡಿದರು.
ಅರಸು ಸಂಕಲ ದೈವಕ್ಷೇತ್ರ ಸಂತಡ್ಕದ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಸಾಧ್ವಿ ಶ್ರೀ ಮಾತಾನಂದಮಯಿ ಬಿಡುಗಡೆಗೊಳಿಸಿದರು. ಅರಸು ಸಂಕಲ ದೈವಕ್ಷೇತ್ರ ಅಧ್ಯಕ್ಷ ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಪಂ ಸದಸ್ಯೆ ಜಯಲಕ್ಷ್ಮೀ ಭಟ್, ಮಹಿಳಾ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಉಪಸ್ಥಿತರಿದ್ದರು. ಸಾಹಿತ್ ಶೆಟ್ಟಿ ಸ್ವಾಗತಿಸಿ, ಆಶಾಲತಾ ಬಿ.ಎಂ.ವಂದಿಸಿದರು. ಜಯಪ್ರಕಾಶ್ ಶೆಟ್ಟಿ ನಿರೂಪಿಸಿದರು. ಕುರಿಯ ರಾಮಮೂರ್ತಿ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಅನ್ನಸಂತರ್ಪಣೆ ಜರುಗಿತು.