ಮೊಬೈಲ್‌ನಿಂದ ದೂರವಿದ್ದರೆ ಶಿಕ್ಷಣದಲ್ಲಿ ಉನ್ನತಿ

19 mdg 1 p1
Published on

ಮೂಡಿಗೆರೆ: ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ತಯಾರಿ ವೇಳೆ ಲವಲವಿಕೆಯಿಂದ ಓದಿಕೊಂಡು ಸವಾಲುಗಳನ್ನು ಎದುರಿಸಲು ಸಿದ್ದರಾದರೆ ಫಲಿತಾಂಶದಲ್ಲಿ ಯಶಸ್ಸು ಸಿಗಲಿದೆ ಎಂದು ಬಣಕಲ್ ಕಪುಚಿನ್ ಕೃಷಿಕ ಸೇವಾ ಕೇಂದ್ರದ ನಿರ್ದೇಶಕ ಫಾ.ಎಡ್ವೀನ್ ಡಿಸೋಜಾ ಹೇಳಿದರು.
ಲ್ಯಾಂಪ್ಸ್ ಸಹಕಾರ ಭವನದಲ್ಲಿ ವಾಯ್ಸ್ ಸಂಸ್ಥೆ ಮತ್ತು ಬಣಕಲ್ ಕೃಷಿಕ ಸೇವಾ ಕೇಂದ್ರದಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಶಿಕ್ಷಣ ಪೂರಕ ತರಬೇತಿ ಹಾಗೂ ಎರಡು ದಿನದ ಕಾರ್ಯಗಾರದಲ್ಲಿ ಮಾತನಾಡಿ, ಶಿಕ್ಷಣ ಎಂಬುವುದು ಕಸಿದುಕೊಳ್ಳಲಾಗದ ಸಂಪತ್ತು, ಅದನ್ನು ಶಾಲೆ-ಕಾಲೇಜು ಹಂತದಲ್ಲಿ ಹೆಚ್ಚಾಗಿ ಸಂಪಾದಿಸಿ ಮುಂದಿನ ಜೀವನದಲ್ಲಿ ಬಳಸಿಕೊಂಡರೆ ಕಠಿಣ ಸವಾಲುಗಳನ್ನೂ ಎದುರಿಸಬುದು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದರೆ ಮಾತ್ರ ಶಿಕ್ಷಣ ಪಡೆಯಲು ಸುಲಭ ದಾರಿಯಿದೆ. ಮೊಬೈಲ್ ಬಳಕೆ ಅತಿಯಾದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ವಿದ್ಯಾರ್ಥಿ ಜೀವನದ ಜೀವನ ಕೂಡ ನಾಶವಾಗಲಿದೆ ಎಂದು ತಿಳಿಸಿದರು.
ಶಿಬಿರದ ತರಬೇತುದಾರ ನವೀನ್ ಆನೆದಿಬ್ಬ ಮಾತನಾಡಿ, ದಶಕದ ಹಿಂದೆ ಶಾಲೆ-ಕಾಲೇಜುಗಳಿಗೆ ಉತ್ತಮ ಕಟ್ಟಡಗಳಿರಲಿಲ್ಲ. ಶಿಕ್ಷಕರ ಕೊರತೆ ಇತ್ತು. ಆದರೂ ಮಕ್ಕಳು ನಾಲ್ಕೈದು ಕಿ.ಮೀ. ದೂರದವರೆಗೆ ಕಾಡು ದಾರಿಯಲ್ಲಿ ಶಾಲೆಗೆ ಹೋಗಬೇಕಾಗಿತ್ತು. ಹಿಂದೆ ಶಿಕ್ಷಣ ಪಡೆದವರು ದೇಶದಲ್ಲಿ ಉನ್ನತಮಟ್ಟದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಹಿಂದಿನಂತೆ ಕಷ್ಟದ ಪರಿಸ್ಥಿತಿಯಿಲ್ಲ. ಈಗ ಶಾಲೆ-ಕಾಲೇಜುಗಳಿಗೆ ಬೃಹತ್ ಕಟ್ಟಡಗಳಿವೆ. ವಾಹನದಲ್ಲಿ ಸಾಗಿ ಶಿಕ್ಷಣ ಪಡೆಯುವ ಶ್ರೀಮಂತಿಕೆಯಿದೆ. ಶಾಲಾ ಪರಿಕರ, ಊಟ, ವಸತಿ ಎಲ್ಲ ವ್ಯವಸ್ಥೆ ಸಿಗುತ್ತಿದ್ದರೂ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಜೀವನ ಕಷ್ಟಕರವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net