ಉನ್ನತಿ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಉಪವಿಭಾಗಾಧಿಕಾರಿ ಎನ್.ಹೇಮಂತ್ ಅನಿಸಿಕೆ

kmp
ಕಂಪ್ಲಿಯಲ್ಲಿ ಕಂದಾಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಉನ್ನತ ಯೋಜನೆ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು. ಬಳ್ಳಾರಿ ಉಪವಿಭಾಗಾಧಿಕಾರಿ ಎನ್.ಹೇಮಂತ್, ತಹಸೀಲ್ದಾರ್ ಗೌಸಿಯಾಬೇಗಮ್ ಇದ್ದರು.
Published on

ಕಂಪ್ಲಿ: ಸುಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಯ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿಯೊಳಗೆ ಅವಶ್ಯಕ ಪ್ರಮಾಣ ಪತ್ರ ನೀಡುವುದು ಉನ್ನತಿ ಯೋಜನೆ ಉದ್ದೇಶವಾಗಿದೆ ಎಂದು ಬಳ್ಳಾರಿ ಉಪವಿಭಾಗಾಧಿಕಾರಿ ಎನ್.ಹೇಮಂತ್ ಹೇಳಿದರು.


ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಕಂದಾಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಉನ್ನತಿ ಯೋಜನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ತಾಲೂಕಿನ 3,793 ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಂಡಿಲ್ಲ. ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಈ ಪ್ರಮಾಣ ಪತ್ರ ಅಗತ್ಯವಿದೆ.

ಪೂರಕ ದಾಖಲೆಗಳನ್ನು ಸಂಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳಿಗೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಪ್ರತಿ ಪತ್ರಕ್ಕೆ 40ರೂ. ಶುಲ್ಕ ನೀಡಬೇಕು. ಉನ್ನತಿ ಯೋಜನೆ ಆ.15ರಂದು ಚಾಲನೆಗೊಳ್ಳಲಿದ್ದು, ಸೆ.17ರಂದು ಜರುಗುವ ಕಲ್ಯಾಣ ಕರ್ನಾಟಕ ದಿನಾಚರಣೆಯಂದು ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.


ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಜಾತಿ, ಆದಾಯ ಮತ್ತು 371ಜೆ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗುತ್ತದೆ.

ಕಳೆದ ಆರೇಳು ದಶಕಗಳಿಂದ ಪಹಣಿಯಲ್ಲಿ ಇನಾಮು ಮುಕ್ತಗೊಳಿಸಲಾಗದೆ ಪರಿತಪಿಸುತ್ತಿರುವ ರೈತರು ಅನುಕೂಲಕ್ಕೆ ಆ.9ರಂದು ರೈತ ಇತ್ಯರ್ಥ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.


ತಹಸೀಲ್ದಾರ್ ಗೌಸಿಯಾಬೇಗಮ್, ಉಪ ತಹಸೀಲ್ದಾರ್ ಕೆ.ರವೀಂದ್ರಕುಮಾರ್, ಬಳ್ಳಾರಿ ಪಶ್ಚಿಮ ವಲಯದ ಬಿಇಒ ಸಿದ್ದಲಿಂಗಮೂರ್ತಿ, ಇಸಿಒ ಜಿ.ವೀರೇಶ್, ಸಮನ್ವಯ ಅಧಿಕಾರಿ ಮನೋಹರ, ಕಂದಾಯ ನಿರೀಕ್ಷಕ ಎಂ.ಜಗದೀಶ, ಐದು ಕ್ಲಸ್ಟರ್‌ಗಳ ಸಿಆರ್‌ಪಿಗಳು, ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net