ಧರ್ಮದ ಮೂಲ ಆಶಯ ಎತ್ತಿ ಹಿಡಿಯಿರಿ

24-SGN-1 MANE
Published on

ಶಿಗ್ಗಾಂವಿ: ಸ್ವಾರ್ಥ ಸಾಧನೆಗೆ ಹೊಂಚು ಹಾಕುವ ಮತೀಯ ಶಕ್ತಿಗಳಿಗೆ ಬುದ್ಧಿ ಕಲಿಸುವ ಮೂಲಕ ಧರ್ಮದ ಮೂಲ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬಾಡ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಯುವಕ ಮಂಡಳದ ಆಶ್ರಯದಲ್ಲಿ ಸೋಮವಾರ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸಿವೆ. ಆದರೆ, ದುಷ್ಟಶಕ್ತಿಗಳು ಸ್ವಾರ್ಥ ಸಾಧನೆಗೆ ಇಡೀ ವಾತಾವರಣ ಹದಗೆಡಿಸಲು ಯತ್ನಿಸುತ್ತಿವೆ. ಇಂತಹ ಯತ್ನಗಳಿಗೆ ಕಡಿವಾಣ ಹಾಕಬೇಕು. ಸೌಹಾರ್ದ, ಭಾವೈಕ್ಯ ಉಸಿರಾಗಿಸಿಕೊಂಡು ನೆಲದ ಸಂಪ್ರದಾಯ, ಸಂಸ್ಕೃತಿ ಉಳಿಸುವ ಕೆಲಸದಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂದರು.
ಯಾಸೀರ್​ಖಾನ್ ಪಠಾಣ ಮಾತನಾಡಿ, ಪ್ರತಿಯೊಂದು ಹಬ್ಬಗಳಿಗೂ ತನ್ನದೆಯಾದ ಹಿನ್ನೆಲೆ, ಮಹತ್ವ ಇದೆ. ಅದನ್ನು ಅರಿತು ಸಾಗಬೇಕಿದೆ. ಗಣೇಶೋತ್ಸವ ನೆಪದಲ್ಲಿ ಎಲ್ಲರೂ ಒಂದೆಡೆ ಸೇರುವುದರಿಂದ ಬೇಧ-ಭಾವ ದೂರವಾಗಲಿದೆ ಎಂದರು.
ಗುಡ್ಡಪ್ಪ ಜಲದಿ, ಮಹದೇವಪ್ಪ ಬಾಗಸರ, ಎಂ.ಜೆ. ಮುಲ್ಲಾ, ಉಮೇಶ ಗೌಳಿ, ಶೇಖಣ್ಣ ಮಾಣೋಜಿ, ರವಿ ಕರಿಗಾರ, ಮಂಜಣ್ಣ ಹಿರೂರ, ಛತ್ರಪತಿ ಶಿವಾಜಿ ಯುವಕ ಮಂಡಳದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು. ಮೆರವಣಿಗೆ ಮೂಲಕ ಗಣಪತಿ ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net