ನೆರಳೂರು ಗ್ರಾಪಂ ಮೇಲ್ದರ್ಜೆಗೇರಿಸಲು ಪಟ್ಟು, 25 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕಿಲ್ಲ ಮೂಲಸೌಲಭ್ಯ

26ank news and photos 04
Published on

ಆನೇಕಲ್: ಅಂದಾಜು 15 ಸಾವಿರ ಜನ ಸಂಖ್ಯೆ ಇದ್ದರೆ ಅಂತ ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿರುವ ನಿದರ್ಶನಗಳಿದ್ದರೂ 25 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿರುವ ಹಾಗೂ 63 ಸದಸ್ಯರನ್ನು ಹೊಂದಿರುವ ನೆರಳೂರು ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮಾರ್ಪಡಿಸಲು ಯಾರೊಬ್ಬರು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ವಿಜಯವಾಣಿ ಜತೆ ಮಾತನಾಡಿದರು. ಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದರೂ ಅಭಿವೃದ್ಧಿಯಾಗಿಲ್ಲ. ಮೂಲಸೌಕರ್ಯ ಕೊರತೆ ನೀಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ರಮೇಶ್ ರೆಡ್ದಿ ಮಾತನಾಡಿ, ಗ್ರಾಮದಲ್ಲಿ ಬಹುತೇಕ ಮಂದಿ ಹೊರಗಿನವರು ಇದ್ದಾರೆ. ಕೈಗಾರಿಕೆಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಅಧಿಕ ಮಂದಿ ವಾಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಅನುದಾನದಿಂದ ಗ್ರಾಮದಲ್ಲಿ ವಾಸ ಮಾಡುವವರಿಗೆ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರಸಭೆಯನ್ನಾಗಿ ಮಾರ್ಪಡಿಸಿದರೆ ಹೆಚ್ಚು ಅನುದಾನ ಸಿಗುವುದರಿಂದ ಜನರಿಗೆ ಸೌಲಭ್ಯ ಒದಗಿಸಬಹುದು ಎಂದರು.

ಸ್ಥಳೀಯ ಕೇಶವರೆಡ್ಡಿ ಮಾತನಾಡಿ, ಈ ಹಿಂದೆ ಆಡಳಿತ ನಡೆಸಿದವರಿಂದ ಈ ಭಾಗದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ವಸತಿ ಸಚಿವ ಸೋಮವಣ್ಣ ಅವರು ಇಲಾಖೆಯಿಂದ ಗ್ರಾಮದ ಅಭಿವೃದ್ಧಿಗೆ 9 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಈ ಅನುದಾನ ಬಿಟ್ಟರೇ ಬೇರೆ ಅನುದಾನ ಸಿಕ್ಕಿಲ್ಲ ಎಂದರು.

ನೆರಳೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಪತ್ರ ಬರೆಯಲಾಗಿತ್ತು. ಈಗಾದರೂ ಸರ್ಕಾರ ಪತ್ರವನ್ನು ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು. ಬಿ.ಶಿವಣ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net